ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಅಡವನಹಳ್ಳಿಯ ಗ್ರಾಮ ಪಂಚಾಯಿತಿಗೆ ಸೇರಿದ ಗಿರೇನಹಳ್ಳಿಯಲ್ಲಿ ನಡೆದ ಊರ ಹಬ್ಬಕ್ಕೆ ವಿದ್ಯುತ್ ದೀಪ ಅಳವಡಿಸುವಂತೆ ಅದೇ ಗ್ರಾಮದ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ್ ಅದೇ ಗ್ರಾಮದಲ್ಲಿ ವಾಸವಿರುವ ನೀರುಗಂಟಿ ಲಕ್ಕಪ್ಪ ಎಂಬುವವರನ್ನು ಆಗ್ರಹಿಸಿದ್ದಾರೆ. ಆ ವೇಳೆ ವಾಟರ್ ಮ್ಯಾನ್ ಲಕ್ಕಪ್ಪ ಬೀದಿ ದೀಪ ಅಳವಡಿಸಲು ನಿರಾಕರಿಸಿದ್ದಾರೆ. ಸದಸ್ಯ ಲಕ್ಷ್ಮೀಕಾಂತ್ ಪಿಡಿಒ ಚಂದ್ರಶೇಖರ್ ರವರಿಗೆ ದೂರವಾಣಿ ಮೂಲಕ ಕರೆ ಮಾಡಿ ನೀರುಗಂಟಿಗೆ ಬೀದಿ ದೀಪ ಅಳವಡಿಸಲು ಸೂಚಿಸುವಂತೆ ಆಗ್ರಹಿಸಿದ್ದಾರೆ. ಪಿಡಿಒ ಸೂಚನೆ ಮೇರೆಗೆ ವಾಟರ್ ಮ್ಯಾನ್ ಲಕ್ಕಪ್ಪ ಬೀದಿ ದೀಪ ಅಳವಡಿಸಿದ್ದರು. ಮರುದಿನ ಗ್ರಾಮದ ಬೀದಿಯೊಂದಕ್ಕೆ ನೀರು ಸರಬರಾಜು ಆಗದ ಕಾರಣ ಆ ಬೀದಿಯ ಜನರು ನೀರು ಬಿಡಿಸುವಂತೆ ಸದಸ್ಯ ಲಕ್ಷ್ಮೀಕಾಂತ್ ರನ್ನು ಆಗ್ರಹಿಸಿದ್ದರು. ನೀರು ಬಿಡಿಸುವ ಸಂಬಂಧ ಸದಸ್ಯ ಲಕ್ಷ್ಮೀಕಾಂತ್, ನೀರುಗಂಟಿ ಲಕ್ಕಪ್ಪನವರನ್ನು ವಿಚಾರಿಸಲು ಹೋದ ವೇಳೆ ಲಕ್ಕಪ್ಪ ತಮ್ಮ ಮನೆಯ ಬಳಿ ನೀರನ್ನು ಪೋಲು ಮಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ್ ವಾಟರ್ ಮ್ಯಾನ್ ಲಕ್ಕಪ್ಪನನ್ನು ಆಕ್ಷೇಪಿಸಿ, ನೀರುಗಂಟಿ ವರ್ತನೆಯನ್ನು ಪುನಃ ಪಿಡಿಒ ಚಂದ್ರಶೇಖರ್ ರವರ ಗಮನಕ್ಕೆ ತಂದಿದ್ದಾರೆ. ಇದರಿಂದ ಕುಪಿತಗೊಂಡ ವಾಟರ್ ಮ್ಯಾನ್ ಲಕ್ಕಪ್ಪ, ಕುಡುಗೋಲಿನ ಹಿಂಭಾಗದಿಂದ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ್ ನ ಎಡ ತೊಡೆ ಮತ್ತು ಕಿವಿಯ ಮೇಲೆ ಹಲ್ಲೆ ಮಾಡಿದ್ದಾರೆಂದು ದಂಡಿನಶಿವರ ಪೋಲಿಸರಲ್ಲಿ ದೂರಲಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ್ ದಂಡಿನಶಿವರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಚುಂಚನಗಿರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದಂಡಿನಶಿವರ ಪೊಲೀಸರು 104/ 25 ರಲ್ಲಿ ಕಾಲಂ 118 (1), 352, 351 (2), ಬಿ ಎನ್ ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.