ಪ್ರಾಕೃತಿಕ ವಿಕೋಪಕ್ಕೆ ವಿಶೇಷ ಪರಿಹಾರ ಒದಗಿಸಲು ಗ್ರಾ.ಪಂ. ಸದಸ್ಯರ ಆಗ್ರಹ

KannadaprabhaNewsNetwork |  
Published : Jun 05, 2025, 01:02 AM IST
ಫೋಟೋ: ೪ಪಿಟಿಆರ್-ಪ್ರೆಸ್ಸುದ್ಧಿಗೋಷ್ಠಿಯಲ್ಲಿ ಸುರೇಶ್ ಅತ್ರಮಜಲು ಮಾತನಾಡಿದರು. | Kannada Prabha

ಸಾರಾಂಶ

ಪ್ರಾಕೃತಿಕ ವಿಕೋಪದಿಂದಾಗಿ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ೩೪ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಮತ್ತು ಬಜತ್ತೂರು ಗ್ರಾಮದಲ್ಲಿ ತೀವ್ರ ಭೂಕುಸಿತ, ಮನೆ ಹಾನಿ, ಕೃಷಿ ಹಾನಿ, ರಸ್ತೆ ಹಾನಿ ಸೇರಿದಂತೆ ಹಲವಾರು ಹಾನಿಗಳು ಸಂಭವಿಸಿದ್ದು, ಸರ್ಕಾರ ಇದಕ್ಕೆ ವಿಶೇಷ ಪರಿಹಾರವನ್ನು ಒದಗಿಸ ಬೇಕೆಂದು ಈ ಭಾಗದ ಗ್ರಾ.ಪಂ. ಸದಸ್ಯರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರಾಕೃತಿಕ ವಿಕೋಪದಿಂದಾಗಿ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ೩೪ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಮತ್ತು ಬಜತ್ತೂರು ಗ್ರಾಮದಲ್ಲಿ ತೀವ್ರ ಭೂಕುಸಿತ, ಮನೆ ಹಾನಿ, ಕೃಷಿ ಹಾನಿ, ರಸ್ತೆ ಹಾನಿ ಸೇರಿದಂತೆ ಹಲವಾರು ಹಾನಿಗಳು ಸಂಭವಿಸಿದ್ದು, ಸರ್ಕಾರ ಇದಕ್ಕೆ ವಿಶೇಷ ಪರಿಹಾರವನ್ನು ಒದಗಿಸ ಬೇಕೆಂದು ಈ ಭಾಗದ ಗ್ರಾ.ಪಂ. ಸದಸ್ಯರು ಆಗ್ರಹಿಸಿದ್ದಾರೆ. ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಉಪ್ಪಿನಂಗಡಿ ಗ್ರಾಪಂ ಸದಸ್ಯರಾದ ಸುರೇಶ್ ಅತ್ರಮಜಲು, ಗಂಗಾಧರ ಪಿ,ಎಂ ಮತ್ತಿತರರು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ೫ ಮನೆಗಳು ಪೂರ್ತಿ ನೆಲಸಮ ಆಗಿದ್ದು, ಸುಮಾರು ೧೫ ಮನೆಗಳಿಗೆ ಬಾಗಶಃ ಹಾನಿಯಾಗಿದೆ. ೬೦ ಮನೆಗಳ ಮುಂದೆ ಗುಡ್ಡ ಜರಿದು ಬಿದ್ದಿದೆ. ಸುಮಾರು ೧೨ ಕಡೆ ರಸ್ತೆ ಬದಿ ದರೆ ಕುಸಿದು ಹಾನಿಯಾಗಿದೆ ಸುಮಾರು ೨ ಸಾವಿರಕ್ಕೂ ಅಧಿಕ ಅಡಕೆ ಮರಗಳು ಧರೆಗೆ ಉರುಳಿದೆ. ತೋಡು ಕಡಿದು ಹೋಗಿ ಸುಮಾರು ೧೦ ಕಿ.ಮೀನಷ್ಟು ಕೃಷಿ ನಾಶವಾಗಿದೆ. ಕೋಡಿಂಬಾಡಿಯಲ್ಲಿಯೂ ರಸ್ತೆ ಹಾನಿಯಾಗಿರುತ್ತದೆ.೩೪ನೇ ನೆಕ್ಕಿಲಾಡಿಯಲ್ಲಿ ದರೆ ಬಿದ್ದು ೮ ಮನೆಗಳಿಗೆ ಹಾನಿಯಾಗಿದ್ದು ರಸ್ತೆ ಬದಿಯಲ್ಲಿ ೮ ಮನೆಗಳಿಗೆ ಹಾನಿಯಾಗಿದ್ದು ರಸ್ತೆ ಬದಿಯಲ್ಲಿ ದರೆ ಬಿದ್ದು ಸಾರ್ವಜನಿಕ ರಸ್ತೆ ನಾದುರಸ್ತಿಯಾಗಿರುತ್ತದೆ. ಸುಮಾರು ೫ ಎಕ್ರೆಯಷ್ಟು ತೋಟಕ್ಕೆ ಹಾನಿಯಾಗಿದೆ. ಹಿರೇಬಂಡಾರಿಯಲ್ಲಿ ಸುಮಾರು ೩೯ ಮನೆಗಳಲ್ಲಿ ೭ ಮನೆಗಳು ಪೂರ್ತಿ ನಾಶವಾಗಿ ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿರುತ್ತದೆ. ಸುಮಾರು ೨೫ ಕಡೆ ರಸ್ತೆಗೆ ಧರೆ ಬಿದ್ದು ಹಾನಿಯಾಗಿರುತ್ತದೆ. ಸುಮಾರು ೧೫೦೦ ಅಡಕೆ ಮರಗಳು ನಾಶವಾಗಿದೆ. ಬಜತ್ತೂರು ಗ್ರಾಮದಲ್ಲಿ ೩ ಮನೆ ಬಾಗಶಃ ಹಾನಿಯಾಗಿದ್ದು ೧೮ ಮನೆಗಳಿಗೆ ಧರೆ ಜರಿದು ಬಿದ್ದಿದೆ. ಕೃಷಿಗೂ ಹಾನಿಯಾಗಿದೆ, ರಸ್ತೆ ಹಲವು ಕಡೆ ಮಣ್ಣು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಒಟ್ಟಿನಲ್ಲಿ ಸುಮಾರು ರು.೨೫ ಕೋಟಿಗೂ ಮಿಕ್ಕಿ ಹಾನಿ ಉಂಟಾಗಿದೆ.ಈ ಭಾಗದಲ್ಲಿ ಇಷ್ಟೊಂದು ಹಾನಿ ಘಟನೆಗಳು ನಡೆದು ಹಲವು ದಿನಗಳಾದರೂ ಈ ಗ್ರಾಮಗಳಿಗೆ ತಾಲೂಕಿನ ತಹಸಲ್ದಾರ್, ಸಹಾಯಕ ಕಮೀಷನರ್, ಜಿಲ್ಲಾಧಿಕಾರಿ ಈ ಭಾಗದ ಪ್ರಕೃತಿ ವಿಕೋಪ ಸಮೀಕ್ಷೆ ಮಾಡುವುದಾಗಲಿ, ಜನರಿಗೆ ಸಾಂತ್ವಾನ, ಧೈರ್ಯ ತುಂಬುವ ಕೆಲಸವನ್ನಾಗಲಿ ಮಾಡಲಿಲ್ಲ. ಕೇವಲ ಪಂಚಾಯಿತಿ ಸದಸ್ಯರೇ ಪರಿಹಾರ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಪೂರ್ತಿ ನಿಷ್ಕ್ರಿಯ ಆಗಿದೆ. ಶಾಸಕರು ಕೂಡ ೩ ದಿನದ ನಂತರ ಬೆಳ್ಳಿಪ್ಪಾಡಿಗೆ ಬಂದು ಮಾಧ್ಯಮಕ್ಕೆ ಪೋಸ್ ಕೊಡುವ ಕೆಲಸ ಮಾಡಿದ್ದಾರೆ ಹೊರತು ಹಾನಿಗೊಳಗಾದ ಜನರಿಗೆ ಪರಿಹಾರ ಕೊಡಿಸುವ ಕೆಲಸವಾಗಲಿ, ಅಧಿಕಾರಿಗಳಿಂದ ಹಾನಿ ಸಮೀಕ್ಷೆ ಕೆಲಸವಾಗಲಿ ಯಾವುದನ್ನು ಮಾಡದೆ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಶಾಸಕರು ನಡೆಸಿದ ಪ್ರಾಕೃತಿಕ ವಿಕೋಪ ತಡೆ ಸಭೆಗೂ ಪಂಚಾಯಿತಿ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿದ್ದಾರೆ. ಸರ್ಕಾರ ಈ ಭಾಗದ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ತಕ್ಷಣ ಮನೆ ನಾಶ ಆದ ಕುಟುಂಬಕ್ಕೆ ರು. ೧೦ ಲಕ್ಷ ಪರಿಹಾರ ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ ರು. ೨ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಕೃಷಿ ಹಾನಿಯಾದ ರೈತರಿಗೆ ಎಕ್ರೆಗೆ ರು. ೨ಲಕ್ಷ ಪರಿಹಾರ ನೀಡಬೇಕು ಈ ಪಂಚಾಯಿತಿಗಳಿಗೆ ತಕ್ಷಣ ತಲಾ ಒಂದೊಂದು ಕೋಟಿ ರು. ರಸ್ತೆ ದುರಸ್ತಿ, ತೋಡು ರಿಪೇರಿ, ಧರೆಯ ಮಣ್ಣು ತೆಗೆಯಲು ಅನುದಾನ ನೀಡಬೇಕು. ಈ ಮೂಲಕ ಈ ಒಂದು ಪ್ರಾಕೃತಿಕ ವಿಕೋಪಕ್ಕೆ ತತ್ಕಾಲಕ್ಕೆ ಶೀಘ್ರ ಕ್ರಮವಹಿಸಬೇಕು ಎಂದು ಅವರು ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ೩೪ನೇ ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷ ಹರೀಶ್ ನಾಯ್ಕ್, ಮಾಜಿ ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಕೋಡಿಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರ ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?