ಸದಾನಂದ ಮಜತಿ
ಬೇಲಿಯೇ ಎದ್ದು ಹೊಲ ಮೇಯ್ದಂತೆ ಜನರ ಆರೋಗ್ಯ, ಪರಿಸರ ಕಾಳಜಿ ಕಾಪಾಡಬೇಕಿದ್ದ ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಪರಿಸರ ಹಾಗೂ ಕುಡಿಯುವ ನೀರಿಗೆ ವಿಷ ಸೇರುತ್ತಿದೆ. ಹೌದು, ಬೆಳಗಾವಿ ನಗರ ಪ್ರವೇಶಕ್ಕೆ ಪ್ರಮುಖ ಮಾರ್ಗವಾಗಿರುವ ಮೋದಗಾ, ಹೊನ್ನಿಹಾಳ, ಪಂತ ಬಾಳೇಕುಂದ್ರಗಿ, ಮುತಗಾ, ಸಾಂಬ್ರಾ ಮತ್ತಿತರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ತಿಪ್ಪೆಗಳೇ ಕಂಡುಬರುತ್ತಿವೆ. ಹೆದ್ದಾರಿ , ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ನಗರಕ್ಕೆ ಆಗಮಿಸುವ ರಾಜ್ಯ ಹಾಗೂ ದೇಶದ ಪ್ರಯಾಣಿಕರ ಮುಂದೆ ಬೆಳಗಾವಿಯ ಮಾನ ಹರಾಜಾಗುತ್ತಿದೆ.
ಹೆದ್ದಾರಿ ಬದಿಯ ಜಾಗ, ಹಳ್ಳಗಳೆಲ್ಲ ಪ್ಲಾಸ್ಟಿಕ್ ತಿಪ್ಪೆಗುಂಡಿ:ಈ ಹೆದ್ದಾರಿಯಲ್ಲಿ ಮಾರಿಹಾಳವರೆಗೆ ನಾಲ್ಕೈದು ಹಳ್ಳಗಳು ಬರುತ್ತವೆ. ಈ ಹಳ್ಳಗಳೂ ತ್ಯಾಜ್ಯ ಎಸೆಯುವ ತಿಪ್ಪೆಗಳಾಗಿ ಪರಿವರ್ತನೆಯಾಗಿವೆ. ಹಳ್ಳದ ಸೇತುವೆ ಪಕ್ಕ ಇಣುಕಿ ನೋಡಿದರೆ ಹಳ್ಳದ ನೀರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಎದೆ ಝೆಲ್ಲೆನ್ನುತ್ತದೆ. ಇಡೀ ಹಳ್ಳ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳಿಂದ ತುಂಬಿಹೋಗಿವೆ.
ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ:ಇದು ಸಾಲದು ಎಂಬಂತೆ ಈ ಪಂಚಾಯಿತಿಗಳು ಮಾಡುತ್ತಿರುವ ಮತ್ತೊಂದು ಅಪಾಯಕಾರಿ ಕೆಲಸ ಎಂದರೆ ಹೆದ್ದಾರಿ ಪಕ್ಕದಲ್ಲಿ ರಾಶಿ ರಾಶಿಯಾಗಿ ಬೀಳುವ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡದೇ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಗ್ರಾಪಂ ಇಬ್ಬರು ಸಿಬ್ಬಂದಿಯೇ ಹೆದ್ದಾರಿ ಬದಿಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಕರಗಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ತ್ಯಾಜ್ಯವೇನೋ ಮಾಯವಾಗುತ್ತದೆ. ಆದರೆ ಅದರಿಂದ ಉತ್ಪತ್ತಿಯಾಗುವ ಬೂದಿ ಹಾಗೂ ಅರ್ಧ ಸುಟ್ಟ ಪ್ಲಾಸ್ಟಿಕ್ ಕಣಗಳು ಜಲಮೂಲಗಳನ್ನು ಸೇರಿ ಜನರಿಗೆ ವಿಷ ಉಣಿಸುತ್ತಿವೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯದ ಹೊಗೆಯಿಂದ ವಾಯು ಮಾಲಿನ್ಯವೂ ಉಂಟಾಗುತ್ತಿದೆ.
ಅಂಗಡಿಗಳ ತ್ಯಾಜ್ಯ ರಸ್ತೆಗೆ:ಹೆದ್ದಾರಿ ಪಕ್ಕದಲ್ಲೆಲ್ಲ ಕಿರಾಣಿ ಅಂಗಡಿ, ಜನರಲ್ ಸ್ಟೋರ್ಸ್, ಧಾಬಾಗಳು ಸೇರಿದಂತೆ ನೂರಾರು ವಾಣಿಜ್ಯ ವ್ಯವಹಾರ ನಡೆಸುವ ಮಳಿಗೆಗಳು ತಲೆ ಎತ್ತಿವೆ. ಬಹುತೇಕ ಈ ಅಂಗಡಿಗಳ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿ ರಸ್ತೆ ಪಕ್ಕ ಎಸೆಯುತ್ತಿದ್ದಾರೆ. ಗ್ರಾಮದ ಹೊರಭಾಗದಲ್ಲಿ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿವೆ. ಇಲ್ಲಿಗೆ ಗ್ರಾಪಂನವರು ತ್ಯಾಜ್ಯ ಸಂಗ್ರಹಕ್ಕೆ ಹೋಗಲ್ಲ ಹೋಗಾಗಿ ಇವರು, ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬೆಳಗ್ಗೆ ಕಚೇರಿ, ಇತರ ಕೆಲಸಕ್ಕೆ ಹೋಗುವಾಗ ರಸ್ತೆ ಪಕ್ಕ ಎಸೆದು ಹೋಗುತ್ತಿದ್ದಾರೆ.ಅಲ್ಲದೆ ಈ ಗ್ರಾಪಂ ವ್ಯಾಪ್ತಿಯಲ್ಲಿ ವಾರದ ಸಂತೆ ನಡೆಯುತ್ತಲಿದ್ದು, ಸಂತೆಯಲ್ಲಿ ಪ್ಲಾಸ್ಟಿಕ್ ಬಳಕೆ ಯಥೇಚ್ಛವಾಗಿ ಬಳಕೆಯಾಗುತ್ತಿದೆ. 90 ಮೆಕ್ರಾನ್ ಒಳಗಿನ ಪ್ಲಾಸ್ಟಿಕ್ ಬಳಕೆ ನಿಷೇಧ ಕಾನೂನು ಇಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಗ್ರಾಪಂ ಆಡಳಿತ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
------ಬಾಕ್ಸ್---ಜಲಾಶಯಗಳ ಒಡಲು ಸೇರುತ್ತಿದೆ ಪ್ಲಾಸ್ಟಿಕ್ ತ್ಯಾಜ್ಯ
ಹೆದ್ದಾರಿ ಬದಿಯಲ್ಲಿ ಹಾಗೂ ಹಳ್ಳದಲ್ಲಿ ಎಸೆಯುವ ಈ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಬೆಂಕಿ ಹಚ್ಚಿ ಸುಡುವುದರಿಂದ ಉಂಟಾಗುವ ಬೂದಿ, ಅರೆಬರೆ ಸುಟ್ಟ ಪ್ಲಾಸ್ಟಿಕ್ ಕಣಗಳು ಮಳೆಗಾಲದಲ್ಲಿ ಹಳ್ಳಗಳ ಮೂಲಕ ಬಳ್ಳಾರಿ ನಾಲಾ ಸೇರಿ ಅಲ್ಲಿಂದ ಘಟಪ್ರಭಾ ನದಿ ಒಡಲು ಸೇರಿಕೊಳ್ಳುತ್ತಿದೆ. ಈ ನೀರು ಮುಂದೆ ಹಿಪ್ಪರಗಿ ಬ್ರಾರೇಜ್, ಜಮಖಂಡಿ ಬ್ಯಾರೇಜ್, ಆಲಮಟ್ಟಿ ಜಲಾಶಯ ಸೇರುತ್ತದೆ. ಈ ಜಲಾಶಯಗಳಿಂದ ಹಲವು ನಗರ, ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಪ್ಲಾಸ್ಟಿಕ್ ಬೂದಿ, ತ್ಯಾಜ್ಯದ ಕಣಗಳು ಕುಡಿಯುವ ನೀರಿನಲ್ಲಿ ಸೇರುವುದರಿಂದ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎನ್ನುತ್ತಾರೆ ಪರಿಸರ ತಜ್ಞರು.-----------
ಕೋಟ್ 1ಮೋದಗಾದಿಂದ ಹಿಡಿದು ಕುಡಚಿವರೆಗೆ ಹಳೆಯ ಗ್ರಾಮದ ಮೂರುಪಟ್ಟು ಅಧಿಕ ಹೊಸ ಬಡಾವಣೆಗಳು ಸೃಷ್ಟಿಯಾಗಿವೆ. ಬೆಳೆಯುತ್ತಿರುವ ಜನಸಂಖ್ಯೆ ತಕ್ಕಂತೆ ಗ್ರಾಪಂಗಳಿಂದ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಕಡೆ ಸ್ವಚ್ಛ ವಾಹಿನಿ ವಾಹನಗಳು ಹೋಗುವುದಿಲ್ಲ. ಇಲ್ಲಿನ ಬಹುತೇಕರು ಪ್ರತಿನಿತ್ಯ ನೌಕರಿ, ಕೂಲಿ ಸೇರಿ ಇತರ ಕೆಲಸಗಳಿಗೆ ಬೆಳಗ್ಗೆ ಬೆಳಗಾವಿಗೆ ಹೋಗುವುದರಿಂದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಹೋಗುವಾಗ ರಸ್ತೆ ಬದಿಗೆ ಎಸೆದು ಹೋಗುತ್ತಿದ್ದಾರೆ. ಗ್ರಾಪಂ ಕಸ ಎಸೆಯಲು ನಿರ್ದಿಷ್ಟ ಜಾಗ ಗುರುತಿಸಿ ಅಲ್ಲಿಂದ ವಾಹನಗಳಲ್ಲಿ ಸಂಗ್ರಹಿಸಿಕೊಂಡು ಹೋದರೆ ಅನುಕೂಲ ಆಗಲಿದೆ.
- ಫಕೀನಾಯ್ಕ ಗೌಡರ, ಪಂತನಗರ ನಿವಾಸಿ----
ಕೋಟ್ 2ಜಗತ್ತಿನಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಇಂದು ಸೂಕ್ತ ನಿರ್ವಹಣೆ ಇಲ್ಲದೆ ಪರಿಸರದಲ್ಲಿಯೇ ಉಳಿದುಹೋಗುತ್ತಿದೆ. ಇದರಲ್ಲಿನ ಮೈಕ್ರೋಪ್ಲಾಸ್ಟಿಕ್ ಎಂಬ ಅತಿ ಸಣ್ಣ ಚೂರುಗಳು ಸಾವಿರಾರು ವರ್ಷಗಳಾದರೂ ಭೂಮಿಯಲ್ಲಿ ಕೊಳೆಯದೇ ಉಳಿದು ಬಿಡುತ್ತವೆ. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಹಾರದ ಪ್ಯಾಕೇಟ್ ಗಳು, ಸ್ಟ್ರಾಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡದೇ ಅವುಗಳನ್ನು ಸುಡುವುದರಿಂದ ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ವಾಯುಮಾಲಿನ್ಯದ ಜೊತೆಗೆ ಕ್ಯಾನ್ಸರ್, ಬಂಜೆತನ, ರೋಗ ನಿರೋಧಕ ಶಕ್ತಿ ಕುಗ್ಗುವಿಕೆ ಸೇರಿದಂತೆ ಅನೇಕ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಪ್ಲಾಸ್ಟಿಕ್‌ನ ಮರುಬಳಕೆ ಹೇಗೆ ಮುಖ್ಯವೋ, ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ಅದಕ್ಕಿಂತ ಮುಖ್ಯ.
-ರಾಜಶೇಖರ ಪಾಟೀಲ, ಯೋಜನಾ ನಿರ್ದೇಶಕರು ಸ.ಜ ನಾಗಲೋಟಿಮಠ ವಿಜ್ಞಾನ ಕೇಂದ್ರ ಬೆಳಗಾವಿ--