ಹೊಳೆಹೊನ್ನೂರಿನಲ್ಲಿ ಆಡಳಿತ ಯಂತ್ರವಿಲ್ಲದೆ ಹಳಿತಪ್ಪಿದ ಗ್ರಾಮ ಪಂಚಾಯಿತಿಗಳು

KannadaprabhaNewsNetwork | Published : Feb 17, 2025 12:33 AM

ಸಾರಾಂಶ

ನಾಲ್ಕು ವರ್ಷ ಕಳೆದರೂ ಹನುಮಂತಪುರ, ಸಿದ್ಲೀಪುರ, ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿ ಇನ್ನೂ ಚುನಾವಣಾ ಭಾಗ್ಯ ದೊರೆತಿಲ್ಲ. ಇದರಿಂದ ಈ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಹಳ್ಳ ಹಿಡಿದಿದೆ.

4 ವರ್ಷವಾದರೂ ಹನುಮಂತಪುರ, ಸಿದ್ಲೀಪುರ, ಎಮ್ಮೆಹಟ್ಟಿ ಆಡಳಿತಕ್ಕೆ ಚುನಾವಣೆಯಲ್ಲಿ । ಗ್ರಾಮಗಳಲ್ಲಿ ಮರೀಚಿಕೆಯಾದ ಮೂಲಸೌಕರ್ಯ

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ನಾಲ್ಕು ವರ್ಷ ಕಳೆದರೂ ಹನುಮಂತಪುರ, ಸಿದ್ಲೀಪುರ, ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿ ಇನ್ನೂ ಚುನಾವಣಾ ಭಾಗ್ಯ ದೊರೆತಿಲ್ಲ. ಇದರಿಂದ ಈ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಹಳ್ಳ ಹಿಡಿದಿದೆ.

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ 4 ವರ್ಷ ಕಳೆದಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಗುರುತಿಸುವಾಗ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳನ್ನು ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ತರಲಾಯಿತು. ಹಾಗಾಗಿ ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಯ ನಾಲ್ಕು ಗ್ರಾಮಗಳಾದ ಎಮ್ಮೆಹಟ್ಟಿಯನ್ನೂ ಒಳಗೊಂಡಂತೆ ಕೆರೆಬೀರನಹಳ್ಳಿ, ಮೂಡಲ ವಿಠಲಾಪುರ, ಹೊಳೆ ಬೈರನಹಳ್ಳಿ. ಸಿದ್ಲೀಪುರ ಗ್ರಾಪಂ ವ್ಯಾಪ್ತಿಯ ಢಣಾಯಕಪುರ, ಹನುಮಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಭರಘಟ್ಟ ಗ್ರಾಮ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಗೆ ಸೇರಿಕೊಂಡವು. ಇದರಿಂದ ನಾಲ್ಕು ವರ್ಷ ಕಳೆದರೂ ಈ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾ ಭಾಗ್ಯ ದೊರೆತಿಲ್ಲ.

ಹನುಮಂತಾಪುರ ಮತ್ತು ಸಿದ್ಲೀಪುರ ಗ್ರಾಪಂನ ತಲಾ ಒಂದೊಂದು ಹಳ್ಳಿ ಪಟ್ಟಣ ಪಂಚಾಯಿತಿಗೆ ಸೇರಿರುವುದರಿಂದ ಇಲ್ಲಿಯೂ ಚುನಾವಣೆ ನಡೆದಿಲ್ಲ. ಸಾಮಾನ್ಯವಾಗಿ ಯಾವುದೇ ಒಂದು ಜನಪ್ರತಿನಿಧಿಯ ಸ್ಥಾನ ಕಾಲಿಯಾಗಿದ್ದರೆ 6 ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕು. ಆದರೆ ಗ್ರಾಮಾಂತರ ಕ್ಷೇತ್ರದ ಮೂರು ಗ್ರಾಮ ಪಂಚಾಯಿತಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೂಲಭೂತ ಸೌಕರ್ಯಗಳ ಕೊರತೆ:

ನಾಲ್ಕು ವರ್ಷಗಳಿಂದ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕುಡಿಯುವ ನೀರು. ಬೀದಿ ದೀಪಗಳ ನಿರ್ವಹಣೆಯಿಲ್ಲದೆ ಜನರು ಕತ್ತಲಲ್ಲಿ ರಾತ್ರಿ ಕಳೆಯಬೇಕಾದ ಸ್ಥಿತಿ ಇದೆ.

ಮರೀಚಿಕೆಯಾದ ಎಂಜಿಎನ್‌ಆರ್‌ಐಜಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಈ ಗ್ರಾಮಗಳಲ್ಲಿ ಇನ್ನೂ ಜಾರಿಯಾಗಿಲ್ಲ. ಇವೆಲ್ಲವನ್ನು ಪಂಚಾಯಿತಿಯ ಆಡಳಿತ ಮಂಡಳಿ ರೂಪಿಸಬೇಕು. ಆದರೆ ಈ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆಯೇ ನಡೆದಿಲ್ಲ. ಆದ್ದರಿಂದ ಉದ್ಯೋಗ ಖಾತ್ರಿ ಯೋಜನೆ ನನೆಗುದಿಗೆ ಬಿದ್ದಿದೆ.

ಆಡಳಿತಾಧಿಕಾರಿಗಳ ದರ್ಪ:

ಎಮ್ಮೆಹಟ್ಟಿ ಪಂಚಾಯಿತಿ ಪಟ್ಟಣ ಪಂಚಾಯಿತಿಗೆ ಸೇರಿರುವುದರಿಂದ ಅಲ್ಲಿನ ಜನರಿಗೆ ಉದ್ಯೋಗ ಖಾತ್ರಿಯ ಕೆಲಸ ನಡೆಯುತ್ತಿಲ್ಲ. ಗ್ರಾಮ ಪಂಚಾಯಿತಿಯಂತೆ ಪಟ್ಟಣ ಪಂಚಾಯಿತಿಗೂ ಚುನಾವಣೆ ನಡೆಯದೇ ಇರುವುದರಿಂದ ಅಲ್ಲೂ ಕೂಡ ಆಡಳಿತಾಧಿಕಾರಿಗಳದ್ದೇ ದರ್ಬಾರು. ಹೊಳೆಬೈರನಹಳ್ಳಿ, ಕೆರೆಬೀರನಹಳ್ಳಿ ಮತ್ತು ಜಂಭರಘಟ್ಟ ಗ್ರಾಮಗಳಿಗೆ ಬಸ್‌ ಸಂಪರ್ಕ ಇಲ್ಲ. ಐದಾರು ಕಿಲೋಮೀಟರ್ ನಡೆದೇ ಹೋಗಬೇಕಾದ ಅನಿವಾರ್ಯತೆ ಇದೆ.

ಗ್ರಾಮಗಳ ಅಭಿವೃದ್ಧಿ ಆಗುತ್ತಿಲ್ಲ. ಯಾವ ಕಾಮಾರಿಗಳು ನಡೆಯುತ್ತಿಲ್ಲ. ಅಧಿಕಾರಿಗಳನ್ನಂತೂ ಕೇಳೋರೆ ಇಲ್ಲ. ವಿಪರ್ಯಾಸ ಎಂದರೆ ನೊಂದವರು ಈಗಲೂ ನಮ್ಮನ್ನು ಗ್ರಾಪಂ ಸದಸ್ಯರು ಎಂದು ತಿಳಿದುಕೊಂಡು ಪಂಚಾಯಿತಿಯಿಂದ ಆಗಬೇಕಾದ ಕೆಲಸಗಳನ್ನು ಹೇಳುತ್ತಾರೆ. ಎಂ.ಚಂದ್ರಪ್ಪ. ಹನುಮಂತಾಪುರ ಗ್ರಾಪಂ ಮಾಜಿ ಸದಸ್ಯರು. ಪಟ್ಟಣ ಪಂಚಾಯಿತಿಯಿಂದ ಹಳ್ಳಿಗಳಿ ಯಾವುದೇ ಪ್ರಯೋಜನ ಆಗಿಲ್ಲ. ಎಂಜಿಎನ್‌ಆರ್‌ಐಜಿ ಫಂಡ್ ನಿಂತು ಹೋಗಿದೆ, ಇ ಸ್ವತ್ತು ಪಡೆಯಲು ಮೂರು ತಿಂಗಳಾದರೂ ಸಾಧ್ಯವಾಗುತ್ತಿಲ್ಲ. ತಿಂಗಳಾದರೂ ಒಂದು ಬಲ್ಬು ಹಾಕಲ್ಲ. ಏನಾದರೂ ಮಾಹಿತಿ ಕೇಳಲು ಹೋದರೆ ಕಚೇರಿಯಲ್ಲಿ ಅಧಿಕಾರಿಗಳೇ ಇರುವುದಿಲ್ಲ.

ಜಿ.ಎನ್.ಪರಶುರಾಮ್. ಎಮ್ಮೆಹಟ್ಟಿ.

ಜನಪ್ರತಿನಿಧಿಗಳಿಲ್ಲದೆ ಯಾವುದೇ ಗ್ರಾಮ ಅಭಿವೃದ್ದಿ ಹೊಂದಲು ಸಾದ್ಯವಿಲ್ಲ. ಅಧಿಕಾರಿಳು ಜನರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಮಾಹಿತಿ ಇದೆ. ಆದಷ್ಟು ಬೇಗ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಚುನಾವಣೆ ನಡೆಸಲಾಗುವುದು.

ಬಲ್ಕೀಶ್ ಬಾನು, ವಿಧಾನ ಪರಿಷತ್ ಸದಸ್ಯ, ಶಿವಮೊಗ್ಗ.

Share this article