ರಕ್ತಹೀನತೆ ತಡೆಗೆ ಪೌಷ್ಟಿಕ ಆಹಾರ ಸೇವನೆ ಅಗತ್ಯ; ಸಂಕನೂರ

KannadaprabhaNewsNetwork | Published : Feb 17, 2025 12:33 AM

ಸಾರಾಂಶ

ಅನೀಮಿಯ ಮುಕ್ತ ಭಾರತವನ್ನಾಗಿಸಲು ಹದಿಹರೆಯದವರಲ್ಲಿ ಆರೋಗ್ಯ ತಪಾಸಣೆ ಕೈಗೊಂಡು ಸೂಕ್ತ ಆರೋಗ್ಯ ಪರಿಕ್ರಮ ಒದಗಿಸುವುದು

ಬಳ್ಳಾರಿ: ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿನ ಕಬ್ಬಿಣಾಂಶ ಕೊರತೆ. ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣಾಂಶ ನಾವು ದಿನನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತಿದ್ದು, ತಪ್ಪದೇ ಎಲ್ಲರೂ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.

ಜಿಲ್ಲಾಡಳಿತ, ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಗುರುತಿಸಲು 5ನೇ ತರಗತಿಯಿಂದ 10ನೇ ತರಗತಿ ಒಳಗಿನ ಮಕ್ಕಳ ಆರೋಗ್ಯದ ತಪಾಸಣೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪಿಂಕ್ ವ್ಯಾನ್ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಮಕ್ಕಳಲ್ಲಿ ರಕ್ತಹೀನತೆ ಕಂಡುಬರುವುದರಿಂದ ಮಕ್ಕಳ ಬೆಳವಣಿಗೆ ಮತ್ತು ಅವರ ಭೌತಿಕ, ಶೈಕ್ಷಣಿಕ ಮತ್ತು ದೈಹಿಕ ಶಕ್ತಿ ಕಡಿಮೆಗೊಳ್ಳುತ್ತದೆ. ಹಾಗಾಗಿ, ಮಕ್ಕಳು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಅನೀಮಿಯ ಮುಕ್ತ ಬಳ್ಳಾರಿಯನ್ನಾಗಿಸಲು ಕೈಜೋಡಿಸಬೇಕು ಎಂದರು.

ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ಅನೀಮಿಯ ಮುಕ್ತ ಭಾರತವನ್ನಾಗಿಸಲು ಹದಿಹರೆಯದವರಲ್ಲಿ ಆರೋಗ್ಯ ತಪಾಸಣೆ ಕೈಗೊಂಡು ಸೂಕ್ತ ಆರೋಗ್ಯ ಪರಿಕ್ರಮ ಒದಗಿಸುವುದು ಪಿಂಕ್ ವ್ಯಾನ್‌ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳಲ್ಲಿ ಶೇ. 50ರಿಂದ 60ರಷ್ಟು ಹೀಮೋಗ್ಲೋಬಿನ್ ಪ್ರಮಾಣ 7ರಿಂದ 8 ಮಿ.ಗ್ರಾಂ. ಇರುವುದು ಕಂಡುಬರುತ್ತಿದ್ದು, ಇದು ಅಪಾಯಕಾರಿ ಸಂಗತಿಯಾಗಿದೆ. ಇದರಿಂದ ಮಕ್ಕಳ ಶಿಕ್ಷಣದ ಭೌತಿಕ ಮಟ್ಟ ಮತ್ತು ದೇಹದ ಶಕ್ತಿ ಕುಗ್ಗುವಿಕೆ ಕಾರಣವಾಗಲಿದೆ. ಹಾಗಾಗಿ, ಮಕ್ಕಳಲ್ಲಿ ಹೀಮೋಗ್ಲೋಬಿನ್ ಪ್ರಮಾಣವು 11ರಿಂದ 12 ಮಿ.ಗ್ರಾಂ ಹೆಚ್ಚಿರಬೇಕು. ಇದರಿಂದ ಮಕ್ಕಳ ಆರೋಗ್ಯ ವೃದ್ಧಿಯಾಗಲಿದೆ ಎಂದು ವಿವರಿಸಿದರು.

ಬಳಿಕ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಬಿಡಿಎಎ ಪುಟ್ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ತಲುಪಿತು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಡಿಎಚ್‌ಒ ಡಾ. ಯಲ್ಲಾ ರಮೇಶ್ ಬಾಬು ಮಾತನಾಡಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಡಾ. ಕೃಷ್ಣ, ಡಾ. ಬಸವರಾಜ್ ಜಿ.ವಿ., ಡಾ. ವಿಶ್ವನಾಥ, ಡಾ. ರವಿಶಂಕರ್, ಮಕ್ಕಳ ತಜ್ಞ ಡಾ. ದುರುಗಪ್ಪ ಸೇರಿದಂತೆ ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಇತರರು ಭಾಗವಹಿಸಿದ್ದರು.

ಮಕ್ಕಳಲ್ಲಿನ ಅಪೌಷ್ಟಿಕತೆ ಗುರುತಿಸಲು 5ನೇ ತರಗತಿಯಿಂದ 10ನೇ ತರಗತಿ ಒಳಗಿನ ಮಕ್ಕಳ ಆರೋಗ್ಯದ ತಪಾಸಣೆ ಸಂಬಂಧ ಹಮ್ಮಿಕೊಂಡಿದ್ದ ಪಿಂಕ್ ವ್ಯಾನ್ ಜಾಥಾ ಕಾರ್ಯಕ್ರಮಕ್ಕೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಚಾಲನೆ ನೀಡಿದರು.

Share this article