ಮಂಡ್ಯ ಮಂಜುನಾಥ
ನಗರಸಭೆ ವ್ಯಾಪ್ತಿಗೆ ಬರುವ ಆಸ್ತಿಗಳಿಗೆ ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಿಸಿರುವ ಖಾತೆಗಳನ್ನು ಹಸ್ತಾಂತರ ಮಾಡುವಂತೆ ತಿಳಿಸಿ ಒಂದು ತಿಂಗಳು ಕಳೆದರೂ ಇದುವರೆಗೂ ಒಂದೇ ಒಂದು ಆಸ್ತಿ ನಗರಸಭೆಗೆ ಹಸ್ತಾಂತರವಾಗಿಲ್ಲ. ಒಟ್ಟು ಆಸ್ತಿಗಳ ಮಾಹಿತಿಯನ್ನೂ ಪಂಚಾಯ್ತಿಗಳು ನಗರಸಭೆಗೆ ಕೊಟ್ಟಿಲ್ಲ. ನಗರಸಭೆಗೆ ಡೋಂಟ್‌ಕೇರ್ ಎಂದಿರುವ ನಗರ ಸುತ್ತಲಿನ ಒಂಬತ್ತು ಪಂಚಾಯ್ತಿಗಳು ಆಸ್ತಿಗಳ ಹಸ್ತಾಂತರ ವಿಚಾರದಲ್ಲಿ ದಿವ್ಯನಿರ್ಲಕ್ಷ್ಯ ವಹಿಸಿವೆ.
ಕಳೆದ ಮಾ.೨೭ರಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಬೂದನೂರು, ಬೇವಿನಹಳ್ಳಿ, ಇಂಡುವಾಳು, ಮಂಡ್ಯ ಗ್ರಾಮಾಂತರ, ಸಾತನೂರು, ಉಮ್ಮಡಹಳ್ಳಿ, ಬೇಲೂರು, ಹಳುವಾಡಿ ಮತ್ತು ಸಂತೆಕಸಲಗೆರೆ ಪಿಡಿಒಗಳ ಸಭೆ ಕರೆದು ನಗರಸಭೆಗೆ ಸೇರಿದ ಆಸ್ತಿಗಳನ್ನು ಪಂಚಾಯ್ತಿಗಳು ಖಾತೆ ಮಾಡಿಕೊಟ್ಟಿದ್ದು, ಅವುಗಳನ್ನು ಗುರುತಿಸಿ ಹಸ್ತಾಂತರಿಸುವಂತೆ ತಿಳಿಸಲಾಗಿತ್ತು.೨೨೦೦ಕ್ಕೂ ಹೆಚ್ಚು ಆಸ್ತಿಗಳು ಖಾತೆ:
ನಗರಸಭೆಗೆ ಸೇರಿದ ಆಸ್ತ್ತಿಗಳಿಗೆ ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಿಸಿರುವ ಸ್ವತ್ತುಗಳಿಗೆ ನಗರಸಭೆಯಿಂದ ಮೂಲ ಸೌಕರ್ಯಗಳನ್ನು ದೊರಕಿಸಲಾಗುತ್ತಿದೆ. ಇದರಿಂದ ನಗರಸಭೆಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ನಗರಸಭೆಗೆ ಸೇರಿದ ಆಸ್ತಿಗಳು ಹಸ್ತಾಂತರಗೊಂಡರೆ ಆದಾಯ ವೃದ್ಧಿಸಿಕೊಳ್ಳಬಹುದೆಂಬ ಆಸೆ ನಗರಸಭೆ ಅಧಿಕಾರಿಗಳದ್ದಾಗಿದೆ. ಆದರೆ, ಇದಕ್ಕೆ ಪಂಚಾಯ್ತಿ ಪಿಡಿಒಗಳಿಂದ ಸ್ಪಂದನೆಯೇ ದೊರಕದಂತಾಗಿದೆ.
ನಗರಸಭೆಗೆ ಸೇರಿದ ಆಸ್ತಿಗಳನ್ನು ಖಾತೆ ಮಾಡಿಕೊಟ್ಟಿರುವ ಪಂಚಾಯ್ತಿಗಳು ಅಲ್ಲಿ ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸದಿದ್ದರೂ ತೆರಿಗೆ ಹಣವನ್ನು ಪಂಚಾಯ್ತಿಯ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಲೇ ಇವೆ. ಇಂತಹ ಸಾವಿರಾರು ಆಸ್ತಿಗಳು ಪಂಚಾಯ್ತಿಯವರ ಕೈಬಿಟ್ಟುಹೋದರೆ ಆದಾಯ ಮೂಲ ಕುಸಿತಗೊಳ್ಳುವ ಆತಂಕ ಎದುರಿಸುತ್ತಿವೆ. ಈ ಆಸ್ತಿಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಇನ್ನಿತರೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುವ ನಗರಸಭೆ ಬರಿಗೈ ದಾಸನಂತೆ ಕುಳಿತಿದೆ. ಆದಾಯಮೂಲ ಸೃಷ್ಟಿಸಿಕೊಳ್ಳಲಾಗದೆ ತಿಣುಕಾಟ ನಡೆಸುತ್ತಿದೆ.
ನಗರಸಭೆಗೆ ಸೇರಿದ ಆಸ್ತಿಗಳನ್ನು ಪಂಚಾಯ್ತಿಗಳಿಗೆ ಬಿಟ್ಟುಕೊಡುವ ಮನಸ್ಸಿಲ್ಲ. ಜೊತೆಗೆ ಪಂಚಾಯ್ತಿಯೊಳಗಿರುವ ಆಸ್ತಿ ಮಾಲೀಕರು ನಗರಸಭೆ ವ್ಯಾಪ್ತಿಗೆ ಬರುವುದಕ್ಕೂ ಬಯಸುತ್ತಿಲ್ಲದಿರುವುದರಿಂದ ಆಸ್ತಿಗಳ ಹಸ್ತಾಂತರ ಪ್ರಕ್ರಿಯೆಗೆ ಗ್ರಹಣ ಹಿಡಿಯುವಂತಾಗಿದೆ.
ಸೌಲಭ್ಯಗಳ ಕೊರತೆಯಿದ್ದರೂ ಗ್ರಾಪಂನಲ್ಲೇ ಉಳಿವು:
ಪಂಚಾಯ್ತಿಗಳಿಗೆ ಸೌಲಭ್ಯ ಕಲ್ಪಿಸಿಕೊಡುವಂತೆ ಸ್ಥಳೀಯ ಬಡಾವಣೆಗಳ ನಿವಾಸಿಗಳು ಸಾಕಷ್ಟು ಒತ್ತಡ ಹೇರುತ್ತಿದ್ದರೂ ಪಂಚಾಯ್ತಿಯವರು ಅತ್ತ ಗಮನವನ್ನೇ ಹರಿಸುತ್ತಿಲ್ಲ. ಒಂಬತ್ತು ಪಂಚಾಯ್ತಿಗಳು ನಗರಸಭೆ ವ್ಯಾಪ್ತಿಗೆ ಸೇರಿದ ಆಸ್ತಿಗಳಿಗೆ ಮೂಲ ಸೌಕರ್ಯ ದೊರಕಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಸೌಕರ್ಯ ಕಲ್ಪಿಸುವುದಕ್ಕೆ ಹಣಕಾಸಿನ ಕೊರತೆ ಸಮಸ್ಯೆಯನ್ನು ಮುಂದಿಡುತ್ತಿವೆ. ಇದರ ನಡುವೆಯೂ ಈ ಆಸ್ತಿಗಳಿಂದ ಗ್ರಾಪಂಗೆ ಆದಾಯ ಬರುತ್ತಿರುವುದರಿಂದ ಆಸ್ತಿಗಳನ್ನು ಬಿಟ್ಟುಕೊಡುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಇದರಿಂದ ಪಂಚಾಯ್ತಿಗಳು ನಿರಾಳವಾಗಿದ್ದರೆ ನಗರಸಭೆ ಪೇಚಿಗೆ ಸಿಲುಕಿದೆ.
- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆ