ಗ್ರಾಪಂಗಳು ಜನರ ಆರೋಗ್ಯದತ್ತ ಗಮನ ನೀಡಬೇಕು: ಶಾಸಕ ಟಿ.ಡಿ.ರಾಜೇಗೌಡ

KannadaprabhaNewsNetwork |  
Published : May 05, 2025, 12:50 AM IST
ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಶೆಟ್ಟಿಕೊಪ್ಪದಲ್ಲಿ   ನಡೆದ ರಕ್ತದಾನ ಶಿಬಿರದಲ್ಲಿ  ಶಾಸಕ ಟ.ಡಿ.ರಾಜೇಗೌಡ ಅವರು ರಕ್ತದಾನ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿಗೆ  ಪ್ರಶಂಸನಾ  ಪತ್ರ ವಿತರಿಸಿದರು  | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಜೊತೆಯಲ್ಲಿ ಗ್ರಾಮದ ಜನರ ಆರೋಗ್ಯದ ಕಡೆಗೂ ನಿಗಾವಹಿಸಬೇಕು ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಬೃಹತ್ ರಕ್ತದಾನ ಶಿಬಿರ ಸಮಾರೋಪ । ಪ್ರಶಂಸನಾ ಪತ್ರ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಜೊತೆಯಲ್ಲಿ ಗ್ರಾಮದ ಜನರ ಆರೋಗ್ಯದ ಕಡೆಗೂ ನಿಗಾವಹಿಸಬೇಕು ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶನಿವಾರ ಕಡಹಿನಬೈಲು ಗ್ರಾಪಂ, ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಕೇಂದ್ರ, ಶೆಟ್ಟಿಕೊಪ್ಪ ಸರ್ಕಾರಿ ಶಾಲೆ, ಸ್ಥಳೀಯ ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಕ್ತದಾನ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿಗೆ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳು ಎಂದರೆ ಕೇವಲ ರಸ್ತೆ, ಚರಂಡಿ, ಇತರೆ ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಮಾಡುವುದಲ್ಲ. ಅದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನೂ ಸಹ ಮಾಡಬೇಕು. ಗ್ರಾಮಸ್ಥರಿಗೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ತಲುಪಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ರಕ್ತದಾನ ಶ್ರೇಷ್ಠದಾನ. ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದು. ಇಂತಹ ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ಸರ್ಕಾರಿ ಆಸ್ಪತ್ರೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ರಕ್ತದಾನ ಮಾಡುವ ಜತೆಗೆ ನಮ್ಮ ಮರಣ ನಂತರದಲ್ಲಿ ತಮ್ಮ ಅಂಗಾಂಗಗಳನ್ನು ದಾನ ಮಾಡಿದರೆ ನಮ್ಮ ಅಂಗಾಂಗಳಿಂದ ಮತ್ತೊಬ್ಬರ ಕುಟುಂಬ ಸಂತೋಷವಾಗಿ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಆಪ್ತ ಸಮಾಲೋಚಕ ಹನುಮಂತಪ್ಪ ಮಾತನಾಡಿ, ರಕ್ತದಾನಿಗಳು ಈ ಸಮಾಜದ ನಿಜವಾದ ಹೀರೋಗಳಿದ್ದಂತೆ. ರಕ್ತವನ್ನು ನೀಡಲು ಹಿಂಜರಿಯಬಾರದು. ರಕ್ತದಾನದಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ರಕ್ತದಾನ ಮಾಡಿದ 3 ತಿಂಗಳ ನಂತರ ಪುನಃ ರಕ್ತದಾನ ಮಾಡಬಹುದಾಗಿದೆ. ನೀವು ಕೊಡುವ ರಕ್ತದಿಂದ 4 ಜನರ ಪ್ರಾಣ ಉಳಿಯುತ್ತದೆ. ಮೆಗ್ಗಾನ್ ಆಸ್ಪತ್ರೆ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ರಕ್ತ ಒದಗಿಸಲಾಗುವುದು. ಆಸ್ಪತ್ರೆಗೆ ದಿನಕ್ಕೆ 100 ರಿಂದ 120 ಬಾಟಲ್ ರಕ್ತ ಅವಶ್ಯಕತೆ ಇದೆ ಎಂದರು.

ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಕಡಹಿನಬೈಲು ಗ್ರಾ.ಪಂ. ಉಪಾಧ್ಯಕ್ಷ ಸುನೀಲ್‌ಕುಮಾರ್, ಪಪಂ ಅಧ್ಯಕ್ಷೆ ಜುಬೇದ ಮಾತನಾಡಿದರು.

ಕಡಹಿನಬೈಲು ಗ್ರಾ.ಪಂ. ಸದಸ್ಯರಾದ ಶೈಲಾಮಹೇಶ್, ವಾಣಿ ನರೇಂದ್ರ, ಪೂರ್ಣಿಮಾ,ಲಿಲ್ಲಿಮಾತುಕುಟ್ಟಿ, ಎ.ಬಿ.ಮಂಜುನಾಥ್, ಚಂದ್ರಶೇಖರ್, ರವೀಂದ್ರ, ಜನ ಜಾಗೃತಿ ವೇದಿಕೆ ಅಧ್ಯಕ್ಷ ಮನೋಹರ್, ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಈಚಿಕೆರೆ ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಬೇಸಿಲ್, ಸುನಾಮಿಜೋಯಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಪಿಡಿಒ ವಿಂದ್ಯಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!