ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ತಾಲ್ಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ಆವರಣದಲ್ಲಿ ಮಹಾತ್ಮ ನರೇಗಾ ಯೋಜನೆಯ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆಯ ಕುರಿತು ಗುರುವಾರ ಗ್ರಾಮ ಸಭೆ ನಡೆಸಲಾಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಎಸ್.ಕಸನಕ್ಕಿ ಮಾತನಾಡಿ, 2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೆ ತಯಾರಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಅಗತ್ಯವಾದ ಕಾಮಗಾರಿಗಳ ಹೆಸರುಗಳನ್ನು ಬರೆಯಿಸಬಹುದು. ಇದಕ್ಕಾಗಿ ಉದ್ಯೋಗ ಖಾತ್ರಿ ನಡೆಗೆ, ಸಬಲತೆಯಡೆಗೆ ಅಭಿಯಾನ ಹಮ್ಮಿಕೊಂಡಿದೆ. ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕವಡಿಮಟ್ಟಿ, ಸರೂರ, ಶಿರೋಳ, ಸರೂರ ತಾಂಡ ಹಾಗೂ ಜಲಪೂರ ಗ್ರಾಮಗಳಲ್ಲಿ ನರೇಗಾ ಯೋಜನೆ ಬಗ್ಗೆ ವ್ಯಾಪಾಕ ಪ್ರಚಾರ ಕೈಗೊಂಡು ಸಾರ್ವಜನಿಕರಿಂದ ಕಾಮಗಾರಿ ಬೇಡಿಕೆಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯತಿ ವ್ಯಾಪ್ತಿಯ 6 ವಾರ್ಡ್‌ಗಳಲ್ಲಿ ನಿಯಮಾನುಸಾರ ವಾರ್ಡ್ ಸಭೆಗಳನ್ನು ನಡೆಸಿ ಯೋಜನೆಯ ಮಾಹಿತಿ ಮುಟ್ಟಿಸಿ 198 ಕಾಮಗಾರಿಗಳ ಬೇಡಿಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಸದರಿ ಕಾಮಗಾರಿಗಳ ಅನುಮೋದನೆ ಕುರಿತು ಗ್ರಾಮ ಸಭೆಯಲ್ಲಿ ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.ಗ್ರಾಪಂ ಕಾರ್ಯದರ್ಶಿ ಅಶೋಕ ಕೊರವೇರ ಅವರು, ಬೇಡಿಕೆ ಸಲ್ಲಿಕೆಯಾದ 198 ಕಾಮಗಾರಿಗಳ ಹೆಸರುಗಳನ್ನು ಓದಿ ಸಭೆಗೆ ಮಾಹಿತಿ ನೀಡಿದರು.
ಸಾಮಾಜಿಕ ಅರಣ್ಯ ಇಲಾಖೆ ಉಪವಲಯ ಅರಣ್ಯ ಅಧಿಕಾರಿ ಅನಿಲ್ ಚವ್ಹಾಣ ಮಾತನಾಡಿ, ನರೇಗಾ ಯೋಜನೆಯಡಿ ರಸ್ತೆ ಬದಿ ನೆಡುತೋಪು ನಿರ್ಮಾಣ, ಗೋಮಾಳ, ಸರ್ಕಾರಿ ಜಾಗದಲ್ಲಿ ನೆಡುತೋಪು ನಿರ್ಮಾಣ ಹಾಗೂ ರೈತರ ಜಮೀನಿನಲ್ಲಿ ಶ್ರೀಗಂಧ, ಹೆಬ್ಬೆವು ಅರಣ್ಯ ಕೃಷಿ ಮಾಡಲು ಅವಕಾಶವಿದ್ದು, ರೈತರು ಬೇಡಿಕೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾ.ಪಂ.ಸದಸ್ಯ ಹನುಮಂತ ಹಂಡ್ರಗಲ್, ಕೇವಲ ರಸ್ತೆ ಬದಿಯಲ್ಲಿ ಕಾಮಗಾರಿ ಪ್ರಾರಂಭಿಸಿ 4 ವರ್ಷ ನಿರ್ವಹಣೆ ವೆಚ್ಚ ಭರಿಸುತ್ತೀರಿ ಇದರಿಂದ ಯಾರಿಗೂ ಪ್ರಯೋಜನವಾಗದೆ ಸರ್ಕಾರದ ದುಡ್ಡು ಪೋಲಾಗುತ್ತಿದೆ. ಕಾಮಗಾರಿ ಅನುಷ್ಠಾನಗೊಂಡ ಸ್ಥಳಗಳಲ್ಲೆ ಮತ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಅಗತ್ಯ ಕಾಮಗಾರಿಗಳ ಮಾಹಿತಿ ನೀಡಿ ಫಲಾನುಭವಿಗಳಿಂದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಿದರು.ಮುದ್ದೇಬಿಹಾಳ ಬ್ಲಾಕ್ ಆರೋಗ್ಯ ಅಧಿಕಾರಿ ಅನಸೂಯ ತೇರದಾಳ ಮಾತನಾಡಿ, ಗ್ರಾಮೀಣ ಪ್ರದೇಶದ ಆರೋಗ್ಯ ಸುಧಾರಣೆಗೆ ಶೌಚಾಲಯಗಳ ನಿರ್ಮಾಣ ಅಗತ್ಯವಿದೆ. ಶೌಚಾಲಯ ಜಾಗೃತಿಗಾಗಿ ಡಿ.10ರವರೆಗೆ ಸಪ್ತಾಹ ಅಭಿಯಾನ ಹಮ್ಮಿಕೊಂಡಿದ್ದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಕುಂತಲಾ ಚ ಹಂಡ್ರಗಲ್, ಉಪಾಧ್ಯಕ್ಷೆ ಶ್ರೀದೇವಿ.ನಿಂ.ಬಿರಾದಾರ, ಸದಸ್ಯರಾದ ಸಿದ್ರಾಮಯ್ಯ ಗುರುವಿನ್, ಸಿದ್ದಮ್ಮ ಬೀರಪ್ಪ ಬಳಬಟ್ಟಿ, ದ್ಯಾವಣ್ಣ ಹುಣಶ್ಯಾಳ, ಸಹಾಯಕ ತೋಟಗಾರಿಕೆ ಅಧಿಕಾರಿ ಸಿದ್ದಪ್ಪ ಮದರಬಂಡಿ, ಐಇಸಿ ಸಂಯೋಜಕ ಪರಮೇಶ ಹೊಸಮನಿ, ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಅನಿಲ್ ಚವ್ಹಾಣ, ಮುಖ್ಯ ಶಿಕ್ಷಕ ಎನ್.ಬಿ.ನಾವದಗಿ, ಸಿಹೆಚ್ ಒ ಜ್ಯೋತಿ ಬಿರಾದಾರ ಇದ್ದರು.