ಸಾರ್ವಜನಿಕರ ಕೊರತೆ ನೀಗಿಸಲು ಗ್ರಾಮಸಭೆ ಅವಶ್ಯ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮಸಭೆಗಳು ಮಹತ್ತರ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಸಭೆಗಳಲ್ಲಿ ಭಾಗವಹಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು.

ಶಾಸಕ ಎಚ್.ಕೆ.ಸುರೇಶ್ ಅಭಿಮತ । ಕಳ್ಳೇರಿ ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ ನಿರ್ಮಿಸುವಂತೆ ಸದಸ್ಯರ ಮನವಿ

ಕನ್ನಡಪ್ರಭ ವಾರ್ತೆ ಬೇಲೂರು

ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮಸಭೆಗಳು ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಗೆಂಡೇಹಳ್ಳಿಯ ಕಳ್ಳೇರಿ ಗ್ರಾಪಂಯಲ್ಲಿ ಅಧ್ಯಕ್ಷ ಅಬ್ದುಲ್ ಹಕೀಂ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮಸಭೆಗಳು ಮಹತ್ತರ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಸಭೆಗಳಲ್ಲಿ ಭಾಗವಹಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಮಲೆನಾಡು ಭಾಗದ ಗ್ರಾಪಂಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವುದಕ್ಕೆ ಗ್ರಾಪಂ ಅಧ್ಯಕ್ಷರೊಂದಿಗೆ ಕೈಜೋಡಿಸಲಾಗುವುದು. ಮತ್ತು ವಿವಿಧ ಇಲಾಖೆಯಿಂದ ಬರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಆದ್ಯತೆ ನೀಡಲಾಗುವುದು. ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮುಂದಾಗಬೇಕು. ಕಳ್ಳೇರಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಸ್ವಚ್ಛತೆಗೆ ಆಧ್ಯತೆ ನೀಡಬೇಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲ ಸಮಸ್ಯೆಗಳನ್ನು ಆಯಾ ಇಲಾಖೆ ಅಧಿಕಾರಿಗಳು ಪರಿಹರಿಸುವತ್ತ ಮುಂದಾಗಲಿದ್ದಾರೆ. ಮತ್ತು ಇಲ್ಲಿನ ಅಧ್ಯಕ್ಷರು ಮತ್ತು ಸದಸ್ಯರ ಶ್ರಮದಿಂದ ಉತ್ತಮ ಕೆಲಸಗಳಾಗುತಿದ್ದು, ಈ ಹಿನ್ನೆಲೆ ಅಧ್ಯಕ್ಷ ಅಬ್ದುಲ್ ಹಕೀಂರನ್ನು ಸನ್ಮಾನಿಸಿ ಅಭಿನಂದಿಸುತ್ತಿದ್ದೇನೆ ಎಂದರು.

ಕಳ್ಳೇರಿ ಗ್ರಾಪಂ ಅಧ್ಯಕ್ಷ ಅಬ್ದುಲ್ ಹಕೀಂ ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸಗಳಾಗಬೇಕಿದೆ. ಗೆಂಡೇಹಳ್ಳಿ ಗ್ರಾಮಕ್ಕೆ ಪ್ರತಿನಿತ್ಯ ನೂರಾರು ಜನರು ಬೇಲೂರು-ಮೂಡಿಗೆರೆ-ಚಿಕ್ಕಮಗಳೂರಿಗೆ ತೆರಳಲು ಬರುವವರಿಗೆ ಸಾರ್ವಜನಿಕ ಶೌಚಗೃಹದ ಅವಶ್ಯಕತೆ ಇದೆ. ಪ್ರತಿ ಶನಿವಾರ ನಡೆಯುವ ಸಂತೆ ಸ್ಥಳವು ೩.೧೮ ಎಕರೆ ಇದ್ದು, ಅದನ್ನು ಬಲಾಡ್ಯರು ಒತ್ತುವರಿ ಮಾಡಿದ್ದಾರೆ, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸರ್ವೇ ಮಾಡಿಸಿ ಬಿಡಿಸಿ ಕೊಡಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಳ್ಳೇರಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕಿದೆ. ಸರ್ಕಾರಿ ಶಾಲೆ, ಆಸ್ಪತ್ರೆಯ ಮುಂಭಾಗ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಅಲ್ಲಿಗೆ ಉಬ್ಬು ನಿರ್ಮಿಸಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಶಾಸಕರು ಗಮನ ಹರಿಸಬೇಕಿದೆ. ಘನತ್ಯಾಜ್ಯ ಘಟಕದ ಸರ್ವೇ ಮುಗಿದಿದ್ದು, ಕೆಲವೇ ದಿನಗಳಲ್ಲಿ ಆಟೋ ಟಿಪ್ಪರ್ ಮನೆ ಬಾಗಿಲಿಗೆ ಬರಲಿವೆ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಹಾಕದೇ ಆಟೋ ಟಿಪ್ಪರ್‌ಗೆ ಹಾಕುವ ಮೂಲಕ ಗ್ರಾಪಂ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಉಪಾಧ್ಯಕ್ಷೆ ಶೋಭ, ಸದಸ್ಯರಾದ ಮಹೇಶ್, ಪ್ರೇಮ್‌ ಕುಮಾರ್, ಶಶಿಕಲಾ, ಕಮಲಮ್ಮ, ಶ್ರೀನಿವಾಸ್, ನಿಂಗೇಗೌಡ, ತಾಪಂ ಇಒ ಸತೀಶ್, ಪಿಆರ್‌ಡಿ ಎಇಇ ರಂಜಿತಾ, ಪಿಡಿಒ ರಮೇಶ್ ಸೇರಿದಂತೆ ಇತರರಿದ್ದರು.

----

Share this article