ಗದಗ: ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಕಟ್ಟ ಕಡೆಯ ವ್ಯಕ್ತಿಯ ಅಭಿಪ್ರಾಯವನ್ನು ಗ್ರಾಮಸಭೆಗಳ ಮೂಲಕ ಮೇಲಿನ ಹಂತಕ್ಕೆ ಕೊಂಡೊಯ್ಯಬೇಕು. ಗ್ರಾಮ ಸಭೆಗಳಲ್ಲಿನ ಅಭಿಪ್ರಾಯಗಳನ್ನು ಯೋಜನೆ ರೂಪದಲ್ಲಿ ಜಾರಿಗೆ ತರುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪ್ರತಿನಿಧಿಗಳು ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್ ಕಾನೂನು ಜಾರಿಗೆ ತರುವುದರಲ್ಲಿ ಜಿಲ್ಲೆಯ ಪಾತ್ರ ಬಹುಮುಖ್ಯವಾಗಿದೆ. ಗ್ರಾಮ ಮಟ್ಟದಿಂದಲೇ ಯೋಜನೆಗಳನ್ನು ರೂಪಿಸುವ ಕಾನೂನಿನಲ್ಲಿವೆ. ಈ ಕಾನೂನು ಸಮರ್ಪಕವಾಗಿ ಅನುಷ್ಠಾನವಾದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.ಕೆಳಹಂತದಿಂದ ಮೇಲಿನ ಹಂತದವರೆಗೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರುವ ಕಾರ್ಯದಲ್ಲಿ ಜಿಲ್ಲೆ ಯಾವುದೇ ಕಾರಣಕ್ಕೂ ಹಿಂದುಳಿಯಬಾರದು. ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಡುವೆ ಸಂಘರ್ಷವಿದ್ದು, ದೇಶದಲ್ಲಿ ಜನರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ ಎಂದರು.ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಶೇಂಗಾ, ಮಾವು ಸೇರಿದಂತೆ ಇತರೆ ಬೆಳೆಗಳ ಇಳುವರಿ ಕಡಿಮೆಯಾಗುತ್ತಿರುವ ಕುರಿತು ಕಾರಣ ತಿಳಿದುಕೊಂಡು ಮಾಹಿತಿ ನೀಡುವುದರ ಜತೆಗೆ ಜಿಲ್ಲೆಯ ಮೂಲ ಅವಶ್ಯಕತೆಗಳು, ಶಾಲೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿವರವಾದ ಮಾಹಿತಿ ಕ್ರೋಡಿಕರಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಈ ವೇಳೆ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾದ ಕೃಷ್ಣಾ ಪರಾಪೂರ, ಬರಕತ್ ಅಲಿಮುಲ್ಲಾ ಅಬ್ದುಲ್, ಚಂದ್ರಶೇಖರಗೌಡ ಕರಿಸೋಮನಗೌಡ, ವಿಜಯಕುಮಾರ ನೀಲಗುಂದ, ರಾಚಯ್ಯ ಮಾಲಗಿತ್ತಿ, ರಾಜೇಸಾಬ ಸಾಂಗ್ಲಿಕರ, ರಾಜಶೇಖರ ಮಾಲಗಿತ್ತಿ, ಸುರೇಶ ಕಟ್ಟಿಮನಿ, ರಾಜೇಸಾಬ ಬೆಟಗೇರಿ, ರಾಜೇಶ್ವರಿ ವೀರನಗೌಡ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ ಚೌಧರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಅವರು 2026- 27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಯಾದಿಯನ್ನು ಮಂಡಿಸಿದರು.