.ಚೇಳೂರಲ್ಲಿ ಸುಲಿಗೆ ಅಡ್ಡೆಯಂತಾದ ಗ್ರಾಮ ಒನ್‌ ಕೇಂದ್ರಗಳು

KannadaprabhaNewsNetwork |  
Published : May 16, 2026, 12:45 AM IST
ಚೇಳೂರು ತಾಲೂಕು ಕಚೇರಿ ಸಂಕೀರ್ಣದ ಪಕ್ಕದಲ್ಲೇ 'ಸಿಎಸ್‌ಸಿ' ನೆಪದಲ್ಲಿ ರೈತರು ಮತ್ತು ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬಂದಿರುವ ಕೇಂದ್ರಗಳು. | Kannada Prabha

ಸಾರಾಂಶ

ಚೇಳೂರು ತಾಲೂಕು ಕಚೇರಿಯ ಕೂಗಳತೆ ದೂರದಲ್ಲಿರುವ ಗ್ರಾಮ ಒನ್ ಮತ್ತು ಸೈಬರ್ ಕೇಂದ್ರಗಳಲ್ಲಿ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಚೇಳೂರು ಸಾರ್ವಜನಿಕ ಸೇವೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರಾಮ ಒನ್ ಕೇಂದ್ರಗಳು ಇಂದು ತಾಲೂಕಿನಲ್ಲಿ ಸುಲಿಗೆಯ ಅಡ್ಡೆಗಳಾಗಿ ಮಾರ್ಪಟ್ಟಿವೆ. ಅದರಲ್ಲೂ ವಿಶೇಷವಾಗಿ ಚೇಳೂರು ತಾಲೂಕು ಕಚೇರಿಯ ಕೂಗಳತೆ ದೂರದಲ್ಲಿರುವ ಗ್ರಾಮ ಒನ್ ಮತ್ತು ಸೈಬರ್ ಕೇಂದ್ರಗಳಲ್ಲಿ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.ವಂಚನೆಯ ಚಾಣಾಕ್ಷ ತಂತ್ರ: ಈ ಕೇಂದ್ರಗಳಿಗೆ ಬರುವ ನಾಗರಿಕರಿಗೆ ನಿರ್ವಾಹಕರು ಮೊದಲು ಯಾವುದೇ ಮಾಹಿತಿ ನೀಡದೆ ಕೆಲಸ ಮಾಡಿಕೊಡುತ್ತಾರೆ. ಆದರೆ ಕೆಲಸ ಮುಗಿದ ನಂತರ, ಸರ್ಕಾರದ ನಿಗದಿತ ಶುಲ್ಕಕ್ಕಿಂತ ₹200 ರಿಂದ ₹500 ರಷ್ಟು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಈ ವೇಳೆ ಯಾರಾದರೂ ವಿದ್ಯಾವಂತರು ಅಥವಾ ಬುದ್ಧಿವಂತರು, ಇದು ಗ್ರಾಮ ಒನ್ ಕೇಂದ್ರವಲ್ಲವೇ? ಇಲ್ಲಿ ಇಷ್ಟೊಂದು ಹಣ ಏಕೆ? ಎಂದು ಪ್ರಶ್ನಿಸಿದರೆ, ನಿರ್ವಾಹಕರು ತಕ್ಷಣವೇ ಸರ್ವರ್ ಸಮಸ್ಯೆ ಇದೆ, ಹಾಗಾಗಿ ನಾವು ಗ್ರಾಮ ಒನ್ ಪೋರ್ಟಲ್ ಬಳಸಿಲ್ಲ. ಇದು ಸಿಎಸ್‌ಸಿ (ಖಾಸಗಿ) ಲಾಗಿನ್ ಮೂಲಕ ಮಾಡಿಕೊಟ್ಟಿರುವುದು. ಇದು ಪ್ರೈವೇಟ್ ಆಗಿರುವುದರಿಂದ ಬಿಲ್ ಕೊಡಲು ಬರುವುದಿಲ್ಲ ಮತ್ತು ರೇಟ್ ಕೂಡ ಜಾಸ್ತಿ ಎಂದು ಉಡಾಫೆಯಾಗಿ ಉತ್ತರಿಸುತ್ತಿದ್ದಾರೆ.ಅಧಿಕಾರಿಗಳ ಮೌನ:

ತಹಸೀಲ್ದಾರ್ ಕಚೇರಿಯ ಪಕ್ಕದಲ್ಲೇ ಇಷ್ಟೊಂದು ಬಹಿರಂಗವಾಗಿ ಸುಳ್ಳು ಹೇಳಿ ವಂಚನೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆಲಸ ಮಾಡುವ ಮೊದಲು ಗ್ರಾಹಕರಿಗೆ ಸರ್ವರ್ ಸಮಸ್ಯೆಯ ಬಗ್ಗೆ ತಿಳಿಸದೆ, ಕೆಲಸ ಮುಗಿದ ಮೇಲೆ ಹಣಕ್ಕಾಗಿ ಖಾಸಗಿ ಲಾಗಿನ್ ನೆಪ ಬಳಸುತ್ತಿರುವುದು ಜನರನ್ನು ವಂಚಿಸುವ ಪರಮಾವಧಿಯಾಗಿದೆ. ಈ ಲೂಟಿಯ ಜಾಲದಲ್ಲಿ ಅಧಿಕಾರಿಗಳ ಪರೋಕ್ಷ ಬೆಂಬಲವಿದೆಯೇ ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

--------ಕೋಟ್‌ಗಳು ...

ಗ್ರಾಮ ಒನ್ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳ ಬಗ್ಗೆ ಎರಡು ದಿನಗಳಲ್ಲಿ ಆಪರೇಟರ್‌ಗಳ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಕೇಂದ್ರದ ಮುಂದೆ ದರಪಟ್ಟಿ ಪ್ರದರ್ಶಿಸುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸುವ ಕೇಂದ್ರಗಳಿಗೆ ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.

- ಶ್ವೇತಾ ಬಿ.ಕೆ., ತಹಸೀಲ್ದಾರ್‌, ಚೇಳೂರು.

-------ತಾಲೂಕು ಕಚೇರಿ ಪಕ್ಕದಲ್ಲೇ ಪಹಣಿ ಪಡೆಯಲು ₹150 ಕೇಳಿದರು. ₹25 ಅಲ್ವಾ ಅಂದ್ರೆ, ನಾವು ಗ್ರಾಮ ಒನ್‌ನಲ್ಲಿ ಮಾಡಿಲ್ಲ, ಪರ್ಸನಲ್ ಐಡಿಯಲ್ಲಿ ಮಾಡಿದ್ದೇವೆ ಅಂತ ದಬಾಯಿಸುತ್ತಾರೆ. ನಮಗೆ ನ್ಯಾಯ ಸಿಗೋದು ಎಲ್ಲಿ?

- ಹೆಸರು ಹೇಳಲು ಇಚ್ಛಿಸದ ರೈತ.

---------ಜಾತಿ ಪ್ರಮಾಣಪತ್ರಕ್ಕೆ ₹300 ಕೇಳಿದರು. ಬಿಲ್ ಕೇಳಿದ್ದಕ್ಕೆ ಇದು ಪ್ರೈವೇಟ್ ಲಾಗಿನ್ ಅಂತಾರೆ. ಗ್ರಾಮ ಒನ್ ಬೋರ್ಡ್ ಹಾಕಿಕೊಂಡು ಹೀಗೆ ಸುಳ್ಳು ಹೇಳುವುದು ಎಷ್ಟು ಸರಿ?

- ಸ್ಥಳೀಯ ವಿದ್ಯಾರ್ಥಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮಠಗಳು
ಟ್ರ್ಯಾಕ್ಟರ್ ಪಲ್ಟಿ: ಒಂದೇ ಕುಟುಂಬದ 7 ಸಾವು