ಕನ್ನಡಪ್ರಭ ವಾರ್ತೆ ದೇವದುರ್ಗ
ಹೊಸದಾಗಿ ರಚನೆಗೊಂಡಿರುವ ಅರಕೇರಾ ತಾಲೂಕಿಗೆ ಸ್ಥಳೀಯರ ವಿರೋಧದ ಮಧ್ಯೆ ಕೆಲ ಗ್ರಾ.ಪಂ.ಗಳನ್ನು ಸೇರ್ಪಡೆ ಮಾಡಲಾಗಿದ್ದು, ಕೂಡಲೇ ರದ್ದುಪಡಿಸಬೇಕೆಂದು ದೇವದುರ್ಗ ತಾಲೂಕುನಲ್ಲಿ ಉಳಿವಿಗಾಗಿ ಹೋರಾಟ ಸಮಿತಿ ಒತ್ತಾಯಿಸಿದೆ.ಪಟ್ಟಣದಲ್ಲಿ ಶಾಸಕರ ಮನೆಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕರಿಗೆ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗ ಬುಧವಾರ ಮನವಿ ಸಲ್ಲಿಸಿತು. ಮಾಜಿ ಶಾಸಕರು ತಪ್ಪು ಅಂಕಿ-ಅಂಶಗಳನ್ನು ಸರಕಾರಕ್ಕೆ ನೀಡಿ, ಜನಾಭಿಪ್ರಾಯ ಸಂಗ್ರಹಿಸಿದೇ, ಸ್ವಹಿತಾಸಕ್ತಿ ಹಾಗೂ ಸ್ವಾರ್ಥಗಾಗಿ ಹೊಸ ತಾಲೂಕು ಘೋಷಣೆ ಮಾಡಿದ್ದಾರೆ. ಹೀಗಾಗಿ ಅನೇಕ ಗ್ರಾ.ಪಂ.ಗಳ ವ್ಯಾಪ್ತಿಯ ಸಾಮಾನ್ಯ ಜನರು ಪರದಾಡುವಂತಾಗಿದೆ.
ಈಗಾಗಲೇ ರಾಮದುರ್ಗ, ಹೆಚ್.ಸಿದ್ದಾಪೂರ, ಮಲದಕಲ್, ಪಲಕನಮರಡಿ, ಕೊತ್ತದೊಡ್ಡಿ, ಸೋಮನಮರಡಿ, ಗಾಣದಾಳ ಮತ್ತು ಮುಂಡರಗಿ ಗ್ರಾ.ಪಂಗಳಲ್ಲಿ ಆಡಳಿತ ಮಂಡಳಿ ಸದಸ್ಯರು ವಿಶೇಷ ಸಭೆ ಆಯೋಜಿಸಿ ದೇವದುರ್ಗ ತಾಲೂಕಿನಲ್ಲಿಯೇ ಮುಂದುವರೆಸಲು ಗೊತ್ತುವಳಿ ಅಂಗೀಕರಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಮಲದಕಲ್, ರಾಮದುರ್ಗ ಗ್ರಾ.ಪಂ.ಗಳ ವ್ಯಾಪ್ತಿಯ ಗ್ರಾಮಗಳಾದ ಮಸೀದಪೂರ, ಸುಂಕೇಶ್ವರಹಾಳ, ಎನ್.ಗಣೇಕಲ್, ರಾಮದುರ್ಗ ಸೇರಿದಂತೆ ಅನೇಕ ಗ್ರಾಮಗಳು ಹೊಸ ತಾಲೂಕು ಕೇಂದ್ರವಾಗಿರುವ ಅರಕೇರಾಕ್ಕೆ ತೆರಳಲು 60 ಕಿ.ಮೀ ಕ್ರಮಿಸಬೇಕು. ಆದರೆ ದೇವದುರ್ಗ ಕೇವಲ 15-20 ಕಿ.ಮೀ. ಅಂತರವಿದೆ. ಗಬ್ಬೂರ ನಾಡಕಚೇರಿಯಲ್ಲಿ ಈ ಗ್ರಾಮಗಳ ರೈತರು ದಾಖಲೆಗಳನ್ನು ಪಡೆಯುತ್ತಿದ್ದರು. ಇದೀಗ ಅರಕೇರಾಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ಗೊಬ್ಬರ,ಕೃಷಿ ಪರಿಕರಗಳನ್ನು ತರಲು ಪರದಾಡುವಂತಾಗಿದೆ.
ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಸೇರಿದಂತೆ ಸುಳ್ಳು ಮಾಹಿತಿ ಸರಕಾರಕ್ಕೆ ನೀಡಿ ವಂಚಿಸಲಾಗಿದೆ. 2001 ಜನಗಣಿತಿ ಪ್ರಕಾರ ಅರಕೇರಾದಲ್ಲಿ ಕೇವಲ 4 ಸಾವಿರ ಜನಸಂಖ್ಯೆ ಇದೆ. ಆದರೆ ಹೊಸ ತಾಲೂಕು ರಚನೆಗಾಗಿ 20 ಸಾವಿರ ಜನಸಂಖ್ಯೆ ಇದೆ ಎನ್ನಲಾಗಿದೆ. ಅರಕೇರಾ ದೇವದುರ್ಗಕ್ಕೆ 125 ಕಿ.ಮೀ. ಅಂತರವಿದೆ. ಜನವಸತಿ ಇರದ ಲಕ್ಷ್ಮೀ ನಾರಾಯಣಪೂರ, ತಿಪ್ಪಾಪೂರದಂತಹ ನಕಲಿ ಗ್ರಾಮಗಳನ್ನು ಸೃಷ್ಠಿಸಿ, ಜನಸಂಖ್ಯೆ ನಮೂದಿಸಲಾಗಿದೆ. ಹೀಗೆ ಅನೇಕ ಸುಳ್ಳು ದಾಖಲೆ ಸೃಷ್ಠಿಸಿ ಹಿಂದಿನ ಸರಕಾರದ ಮೇಲೆ ಒತ್ತಡ ಹೇರಿ ಯಾರಿಗೂ ಬೇಕಾಗದೇಯಿದ್ದ ಹೊಸ ತಾಲೂಕು ಘೋಷಣೆ ಮಾಡಲಾಗಿದೆ.ಸ್ಥಳೀಯ ಕ್ಷೇತ್ರದ ಮತದಾರರ ನಾಡಿ ಮಿಡಿತ, ಹೊಸ ತಾಲೂಕು ರಚನೆಗೆ ಸಲ್ಲಿಸಿರುವ ಸುಳ್ಳು ದಾಖಲೆಗಳನ್ನು ಪರಿಶೀಲಿಸಿ, ಗ್ರಾ.ಪಂಗಳು ಸಲ್ಲಿಸಿರುವ ಗೊತ್ತುವಳಿಗಳನ್ನು ಪಡೆದು ಮುಂಬರುವ ಅಧಿವೇಶನದಲ್ಲಿ ಚರ್ಚಿಸಿ ದೇವದುರ್ಗ ತಾಲೂಕಿನಲ್ಲಿಯೆ ಮುಂದುವರೆಯುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮೂಡಲಗುಂಡ, ತಾಪಂ ಮಾಜಿ ಸದಸ್ಯ ಗೋವಿಂದರಾಜ್ ನಾಯಕ, ಹೋರಾಟ ಸಮಿತಿ ಮುಖಂಡರಾದ ಮಲ್ಲಯ್ಯ ಕಟ್ಟೀಮನಿ, ರಂಗಣ್ಣ ಕೋಲ್ಕಾರ್, ಶರಣಗೌಡ ಸುಂಕೇಶ್ವರಹಾಳ, ಸಾಬಣ್ಣ ಕಮಲದಿನ್ನಿ, ಪರಮಾನಂದ ಸುಂಕೇಶ್ವರಹಾಳ, ಶರಣಗೌಡ ಕಮಲದಿನ್ನಿ, ಇಸಾಕ್ ಮೇಸ್ತ್ರಿ, ರಾಮನಗೌಡ ಜಾಲಹಳ್ಳಿ, ಮರೆಣ್ಣ ನಾಯಕ, ಶ್ರೀನಿವಾಸ ನಾಯಕ, ಶಿವಪ್ಪ ಪಲಕನಮರಡಿ, ಶಿವರಾಜ ಮುಂಡರಗಿ, ಮೌನೇಶ ಗಾಣದಾಳ, ಜಿ.ಜಿ.ನಾಯಕ, ಶಿವನಗೌಡ ದೇಸಾಯಿ ಹಾಗೂ ಇತರರು ಇದ್ದರು.