ಹರಿಹರದಲ್ಲಿ ಭಕ್ತರ ಅದ್ಧೂರಿ ಸಂಭ್ರಮಾಚರಣೆ, ವಿವಿಧೆಡೆ ಅನ್ನಸಂತರ್ಪಣೆ

KannadaprabhaNewsNetwork | Published : Jan 23, 2024 1:47 AM

ಸಾರಾಂಶ

ತುಂಗಭದ್ರಾ ನದಿಯ ದಡದಲ್ಲಿರುವ ಸಮರ್ಥ ಸದ್ಗುರು ಶ್ರೀ ನಾರಾಯಣ ಆಶ್ರಮದಲ್ಲಿನ ರಾಮಮಂದಿರದಲ್ಲಿ ಬೆಳಗ್ಗೆ ಸುಮಾರು ೨೫ ಕ್ಕೂ ಹೆಚ್ಚು ಪ್ರಧಾನ ಅರ್ಚಕರಿಂದ ಆರತಿ, ಪಂಚಾಮೃತ ಅಭಿಷೇಕ, ಶ್ರೀ ರಾಮತಾರಕ ಹೋಮ, ಸಂಕೀರ್ತನ, ಅಲಂಕಾರ, ಪ್ರಸಾದ ವಿನಿಯೋಗ, ಸಂಜೆ ಭಜನೆ, ಆರತಿ, ಜ್ಯೋತಿ ಪ್ರಜ್ವಲನ, ಹನುಮಾನ್ ಚಾಲೀಸ್ ಮಂತ್ರ ಪಠಣ, ಗೋ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ನಿಮಿತ್ತ ತಾಲೂಕಿನಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ ಹಾಗೂ ರಕ್ತದಾನ ಶಿಬಿರ, ಕೋಸಂಬರಿ, ಪಾನಕ ವಿತರಿಸುವ ಜೊತೆಗೆ ಮನೆ ಮುಂದೆ ದೀಪಗಳ ಹಚ್ಚಿ ರಾಮೋತ್ಸವ ಸಡಗರದಿಂದ ಆಚರಿಸಿದರು.

ನಗರದ ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಹಾಗೆಯೇ ಊರಿನ ಗ್ರಾಮ ದೇವತೆಯಾದ ಕಸಬಾ ಹಾಗೂ ಮಹಾಜೇನಹಳ್ಳಿ ಗ್ರಾಮದೇವತೆ ಶ್ರೀ ಊರಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ತುಂಗಭದ್ರಾ ನದಿಯ ದಡದಲ್ಲಿರುವ ಸಮರ್ಥ ಸದ್ಗುರು ಶ್ರೀ ನಾರಾಯಣ ಆಶ್ರಮದಲ್ಲಿನ ರಾಮಮಂದಿರದಲ್ಲಿ ಬೆಳಗ್ಗೆ ಸುಮಾರು ೨೫ ಕ್ಕೂ ಹೆಚ್ಚು ಪ್ರಧಾನ ಅರ್ಚಕರಿಂದ ಆರತಿ, ಪಂಚಾಮೃತ ಅಭಿಷೇಕ, ಶ್ರೀ ರಾಮತಾರಕ ಹೋಮ, ಸಂಕೀರ್ತನ, ಅಲಂಕಾರ, ಪ್ರಸಾದ ವಿನಿಯೋಗ, ಸಂಜೆ ಭಜನೆ, ಆರತಿ, ಜ್ಯೋತಿ ಪ್ರಜ್ವಲನ, ಹನುಮಾನ್ ಚಾಲೀಸ್ ಮಂತ್ರ ಪಠಣ ಹಾಗೂ ಗೋ ಪೂಜೆ ನೆರವೇರಿಸಿದರು.

ನಗರದ ಹೈಸ್ಕೂಲ್ ಬಡಾವಣೆ ರಾಮ ಮಂದಿರದಲ್ಲಿ ರಾಮ,ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಹೋಮ, ಅಲಂಕಾರ, ಮಹಾಮಂಗ ಳಾರತಿ ಪ್ರಸಾದ ವಿನಿಯೋಗ ನಂತರ ದೇವಾಲಯ ಆವರಣದಲ್ಲಿ ಎಲ್.ಇ.ಡಿ. ಸ್ಟೀನ್ ಮೂಲಕ ಭಕ್ತರಿಗೆ ಅಯೋಧ್ಯೆಯಲ್ಲಿ ನಡೆಯುವ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಜೊತೆಗೆ ಕರಸೇವಕರಿಗೆ ಸನ್ಮಾನಿಸಲಾಯಿತು.

ನಗರದ ಎಚ್.ಶಿವಪ್ಪ ಸರ್ಕಲ್ ನಲ್ಲಿರುವ ಶ್ರೀ ಪೇಟೆ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು ನಂತರ ದೇವಸ್ಥಾನ ಆವರಣದಲ್ಲಿ ಎಲ್.ಇ.ಡಿ. ಸ್ಕ್ರೀನ್ ಮೂಲಕ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಿ ಹಿಂದೂ ಜಾಗರಣ ವೇದಿಕೆಯಿಂದ ಅನ್ನಸಂತರ್ಪಣೆ ನಡೆಸಲಾಯಿತು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಭಾಗವಹಿಸಿ ಸಿಹಿ ಹಂಚಿದರು, ಹಾಗೆಯೇ ಮರಾಠದಲ್ಲಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ಥಳೀಯರು ಸಂಭ್ರಮಿಸಿ ರಾಮಮಂದಿರ ಉದ್ಘಾಟನೆ ಹರ್ಷ ವ್ಯಕ್ತಪಡಿಸಿದರು.

ತಾಲೂಕಿನ ಬೆಲೆಬೆನ್ನೂರು ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ತಾಲೂಕಿನ ವಿವಿಧ ಗ್ರಾಮಗಳ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಲಾಯಿತು. ಶಾಸಕ ಬಿ.ಪಿ ಹರೀಶ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article