ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಇಡೀ ಕ್ಷೇತ್ರವು ಗೋವಿಂದನಾಮ ಸ್ಮರಣೆಯಿಂದ ಮೊಳಗಿಬಂದರೆ, ಭಕ್ತರ ಉತ್ಸಾಹದಿಂದ ಜಾತ್ರಾ ಮಹೋತ್ಸವಕ್ಕೆ ವಿಶೇಷ ಮೆರುಗು ಮೂಡಿತು. ಜಾತ್ರಾ ಮಹೋತ್ಸವದ ಅಂಗವಾಗಿ ದ್ವಾದಶಿ ದಿನ ಮುಂಜಾನೆಯಿಂದಲೇ ದೇವಾಲಯದತ್ತ ಭಕ್ತರ ದಂಡೇ ಹರಿದುಬಂತು. ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀ ಸಮೇತ ಗೋವಿಂದರಾಜಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಭಕ್ತರು, ನಂತರ ಕಡಿದಾದ ಬೆಟ್ಟ ಹತ್ತಿ ಬೆಟ್ಟದ ಮೇಲಿರುವ ಶ್ರೀ ಪದ್ಮಾವತಿ ಸಮೇತ ಲಕ್ಷ್ಮೀ ವೆಂಕಟರಮಣಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಕೃತಾರ್ಥರಾದರು.
ಮಧ್ಯಾಹ್ನ ಶ್ರೀದೇವಿ-ಭೂದೇವಿ ಸಮೇತ ವೆಂಕಟರಮಣಸ್ವಾಮಿಯ ಉತ್ಸವಮೂರ್ತಿಯನ್ನು ವಿಶೇಷ ಪುಷ್ಪಾಲಂಕೃತ ಮಹಾರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರು ‘ಗೋವಿಂದ..ಗೋವಿಂದ..’ಎಂದು ಘೋಷಣೆ ಕೂಗುತ್ತಾ ಭಕ್ತಿ ಪರವಶರಾಗಿ ರಥವನ್ನು ಎಳೆದರು. ರಥ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಕೈಮುಗಿದು ಪ್ರಾರ್ಥನೆ ಸಲ್ಲಿಸಿದ ದೃಶ್ಯ ಭಕ್ತಿಭಾವಕ್ಕೆ ಸಾಕ್ಷಿಯಾಯಿತು. ರಥೋತ್ಸವದಲ್ಲಿ ಪಾಲ್ಗೊಂಡು ಅಲಂಕೃತ ರಥದ ಮೇಲೆ ಬಾಳೆಹಣ್ಣು ಅರ್ಪಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ನೂತನ ದಂಪತಿ ಸೇರಿದಂತೆ ಅನೇಕ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಕುಟುಂಬದ ಸುಖ, ಸಮೃದ್ಧಿ ಹಾಗೂ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿದರು.ವಿಶೇಷ ಅಲಂಕಾರ:ಜಾತ್ರೆ ಅಂಗವಾಗಿ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ, ಶ್ರೀದೇವಿ- ಭೂದೇವಿ ಹಾಗೂ ಪದ್ಮಾವತಿ ಅಮ್ಮನವರಿಗೆ ವಿವಿಧ ಬಗೆಯ ಪುಷ್ಪ, ಚಿನ್ನಾಭರಣ ಮತ್ತು ರೇಷ್ಮೆ ವಸ್ತ್ರಗಳಿಂದ ಅಲಂಕಾರ ಮಾಡಲಾಗಿದ್ದು, ದೇವರ ದಿವ್ಯ ದರ್ಶನ ಭಕ್ತರ ಕಣ್ಮನ ಸೆಳೆಯಿತು. ದೇವಾಲಯದ ಆವರಣವನ್ನು ಸುಣ್ಣಬಣ್ಣಗಳಿಂದ ಅಲಂಕರಿಸಿ, ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.ಪೊಲೀಸ್ ಬಂದೋಬಸ್ತ್:ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಭಕ್ತರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರಸೀಕೆರೆಯಿಂದ ಮಾಲೇಕಲ್ ತಿರುಪತಿವರೆಗೆ ವಿಶೇಷ ಬಸ್ ಸೇವೆಯನ್ನು ಕಲ್ಪಿಸಿತ್ತು. ಅಲ್ಲದೆ, ದೇವಾಂಗ, ಈಡಿಗ ಹಾಗೂ ಬ್ರಾಹ್ಮಣ ಸಮಾಜದ ವತಿಯಿಂದ ಸಾವಿರಾರು ಭಕ್ತರಿಗೆ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ರಥೋತ್ಸವದಲ್ಲಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ, ತಹಸೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಯಾಗಿರುವ ಸಂತೋಷ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು. ದೇವಾಲಯದ ಅಭಿವೃದ್ಧಿ ಸಮಿತಿಯ ನಾಗರಾಜು, ತಿರುಪತಿ ಚಂದ್ರು, ಎಸ್.ವಿ.ಟಿ. ಬಾಬು, ಪಾರುಪತ್ತೇದ್ದಾರ್ ಲೋಕೇಶಯ್ಯ, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿದಂತೆ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.