ಪಂಚಾಕ್ಷರ ಗವಾಯಿ, ಪುಟ್ಟರಾಜ ಗವಾಯಿಗಳ ಮಹಾರಥೋತ್ಸವ ಸಂಪನ್ನ

KannadaprabhaNewsNetwork |  
Published : Jul 06, 2026, 02:30 AM IST
 | Kannada Prabha

ಸಾರಾಂಶ

ಜ್ಯೇಷ್ಠ ಬಹುಳ ಪಂಚಮಿಯ ಶುಭ ದಿನವಾದ ಭಾನುವಾರ ಸಂಜೆ ಹರ- ಗುರು- ಚರಮೂರ್ತಿಗಳು ರಥಕ್ಕೆ ಚಾಲನೆ ನೀಡಿದರು. ಆಶ್ರಮದಿಂದ ಆರಂಭವಾದ ತೇರು, ಎಪಿಎಂಸಿ ಪ್ರಾಂಗಣದ ದ್ವಾರಬಾಗಿಲು ಬಳಿಯ ಪಾದಗಟ್ಟೆ ವರೆಗೆ ಸಾಗಿತು.

ಗದಗ: ಅಂಧ, ಅನಾಥ ಮಕ್ಕಳ ಬಾಳಿನ ಬೆಳಕಾಗಿರುವ ನಗರದ ಪ್ರಸಿದ್ಧ ವೀರೇಶ್ವರ ಪುಣ್ಯಾಶ್ರಮದ ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಭಾನುವಾರ ಉಭಯ ಗುರುಗಳ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಆಶ್ರಮದ ರಥದ ಮೇಲಿನ ಗಾಲಿಯ ಮೇಲೆ ಅನ್ಯಕೋಮಿನ ಮಹಿಳೆಯರ ಹೆಸರು ಹಾಕಿಸಿರುವುದಕ್ಕೆ ಹಿಂದೂ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಥದ ಗಾಲಿಯ ಮೇಲಿರುವ ಹೆಸರು ತೆಗೆಯದೇ ಇದ್ದರೆ ರಥೋತ್ಸವದ ಮುಂದೆ ಮಲಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಇದೆಲ್ಲರ ಮಧ್ಯೆ ಆಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ನನಗೆ ಟ್ರಸ್ಟಿಗಳಿಂದಲೇ ಜೀವಭಯವಿದೆ ಎಂದು ಹೇಳಿಕೆ ನೀಡಿದ್ದರಿಂದ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಈ ಬಾರಿ ಅತಿ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು.

ಈ ಎಲ್ಲ ಬೆಳವಣಿಗೆಯ ಮಧ್ಯೆ ಶನಿವಾರ ರಥದ ಗಾಲಿಯ ಮೇಲೆ ಹೆಸರು ಹಾಕಿಸಿರುವ ಅನ್ಯ ಕೋಮಿನ ವ್ಯಕ್ತಿಗಳೇ ನಮ್ಮ ಹೆಸರನ್ನು ತೆಗೆದು ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಜಿಲ್ಲಾಡಳಿತ, ಜಿಲ್ಲೆಯ ಹಿರಿಯ ಮುಖಂಡರು ಸೇರಿದಂತೆ ಅನೇಕ ಗಣ್ಯರೊಂದಿಗೆ ನಡೆದ ಹಲವಾರು ಸಭೆಗಳು ಚರ್ಚೆಗಳ ನಂತರ ಭಾನುವಾರ ಸಂಜೆ ರಥೋತ್ಸವ ಯಶಸ್ವಿಯಾಗಿ ಜರುಗಿತು.

ಜ್ಯೇಷ್ಠ ಬಹುಳ ಪಂಚಮಿಯ ಶುಭ ದಿನವಾದ ಭಾನುವಾರ ಸಂಜೆ ಹರ- ಗುರು- ಚರಮೂರ್ತಿಗಳು ರಥಕ್ಕೆ ಚಾಲನೆ ನೀಡಿದರು. ಆಶ್ರಮದಿಂದ ಆರಂಭವಾದ ತೇರು, ಎಪಿಎಂಸಿ ಪ್ರಾಂಗಣದ ದ್ವಾರಬಾಗಿಲು ಬಳಿಯ ಪಾದಗಟ್ಟೆ ವರೆಗೆ ಸಾಗಿತು. ರಥದಗುಂಟ ಹೆಜ್ಜೆ ಹಾಕಿದ ಲಕ್ಷಾಂತರ ಭಕ್ತರು ಗುರುಕುಮಾರ ಪಂಚಾಕ್ಷರ ಮಹಾರಾಜ ಕೀ ಜೈ, ಪುಟ್ಟರಾಜ ಮಹಾರಾಜ್ ಕೀ ಜೈ ಎಂಬ ಜಯ ಘೋಷಗಳನ್ನು ಕೂಗಿದರು. ಭಕ್ತರು ಭಕ್ತಿಭಾವದಿಂದ ತೇರಿಗೆ ಉತ್ತತ್ತಿ, ಬಾಳೆಹಣ್ಣು ಹಾಗೂ ಫಲಪುಷ್ಪಗಳನ್ನು ಸಮರ್ಪಿಸಿ ಧನ್ಯತೆ ಮೆರೆದರು.ಭವ್ಯ ಮೆರವಣಿಗೆ: ರಥೋತ್ಸವಕ್ಕೂ ಮುನ್ನ ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರಗಳ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಭಕ್ತರು ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಿ ಸ್ವಾಗತಿಸಿದರು.ಪುಟ್ಟರಾಜರ ವೃತ್ತಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆ, ಜಯಘೋಷಗಳೊಂದಿಗೆ ಪುಟ್ಟರಾಜರ ಬೃಹತ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕರಡಿ ಮಜಲು, ಜಾಂಜ್ ಮೇಳ, ಚಂಡಿ ಮದ್ದಳೆ, ನಂದಿಕೋಲ ಸಮ್ಮಾಳ, ಬ್ಯಾಂಜ್ ಮೇಳ ಹಾಗೂ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಜನಾ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ: ಉಭಯ ಗುರುಗಳ ಜಾತ್ರೆಯ ನಿಮಿತ್ತ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ಪುಣ್ಯಾಶ್ರಮದಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಠದ ಹೊರತಾಗಿಯೂ, ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರು ಗುರುಗಳ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ತಮ್ಮ ಸೇವಾಭಾವ ಮೆರೆದರು. ಆಟೋ ಚಾಲಕರು ಹಳೆಯ ಜಿಲ್ಲಾಧಿಕಾರಿ ಕಚೇರಿಯಿಂದ ವೀರೇಶ್ವರ ಪುಣ್ಯಾಶ್ರಮಕ್ಕೆ ಉಚಿತ ಸೇವೆ ನೀಡುವ ಮೂಲಕ ಗಮನ ಸೆಳೆದರು.ಸಂಗೀತ ನಮನ: ಜಾತ್ರಾ ಮಹೋತ್ಸವದ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಮಠದಲ್ಲಿ ಸರಣಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಾನುವಾರ ಉಭಯ ಗುರುಗಳ ಗದ್ದುಗೆಗೆ ಹಾಗೂ ದೇವಸ್ಥಾನಕ್ಕೆ ಬಗೆಬಗೆಯ ಹೂವುಗಳು ಮತ್ತು ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತ ಸಾವಿರಾರು ಭಕ್ತರು ಗದ್ದುಗೆಯ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ಮಠದ ಆವರಣದಲ್ಲಿ ನಾಡಿನ ವಿವಿಧ ಸಂಗೀತ ಕಲಾತಂಡಗಳಿಂದ ಅಹೋರಾತ್ರಿ ಉಚಿತ ಸಂಗೀತ ಸೇವೆ ನಡೆಯುವ ಮೂಲಕ ಗುರುಗಳಿಗೆ ನಾದನಮನ ಸಲ್ಲಿಸಿದರು.

ಗದುಗಿನಲ್ಲಿ ಪಂ. ಪಂಚಾಕ್ಷರ ಗವಾಯಿಗಳು ಮತ್ತು ಪಂ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಸಂಜೆ ಮಹಾ ರಥೋತ್ಸವ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ
ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ