ಬೊಮ್ಮಾಯಿ ಆರೋಪ ಹಸಿ ಸುಳ್ಳು, ಬಹಿರಂಗ ಕ್ಷಮೆ ಕೇಳಲಿ: ಎಚ್‌.ಕೆ. ಪಾಟೀಲ

KannadaprabhaNewsNetwork |  
Published : Jul 06, 2026, 02:15 AM IST
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಎಚ್.ಕೆ.ಪಾಟೀಲ ಎಂದು ಹೆಸರಿರುವ ಇನ್ನುಳಿದ ವ್ಯಕ್ತಿಗಳು ಹಾಜರಾಗಿ ದಾಖಲೆ ಪ್ರದರ್ಶನ ಮಾಡಿದರು. | Kannada Prabha

ಸಾರಾಂಶ

ಬೊಮ್ಮಾಯಿ ಅವರು ತಮ್ಮ ಆರೋಪಗಳನ್ನು ಸಮರ್ಥಿಸುವ ಯಾವುದೇ ದಾಖಲೆಗಳಿಲ್ಲದೆ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಮಾಜಿ ಮುಖ್ಯಮಂತ್ರಿಯಂತಹ ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ. ಕೂಡಲೇ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.

ಗದಗ: ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳು. ಉತ್ತಮ ರಾಜಕೀಯ ಕುಟುಂಬದಿಂದ ಬಂದವರು. ಹಲವಾರು ದಶಕಗಳ ಕಾಲ ರಾಜಕೀಯದಲ್ಲಿ ಇದ್ದವರು. ನನ್ನ ಹೆಸರು ಉಲ್ಲೇಖಿಸಿ ಮಾಡಿರುವ ಆರೋಪ ಸಂಪೂರ್ಣ ಆಧಾರರಹಿತ, ಹಸಿ ಸುಳ್ಳು ಹಾಗೂ ದುರುದ್ದೇಶಪೂರಿತವಾಗಿದೆ. ನನ್ನ ಚಾರಿತ್ರ್ಯವಧೆಗೆ ನಡೆಸಿರುವ ರಾಜಕೀಯ ಕುತಂತ್ರವಾಗಿದೆ. ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೊಮ್ಮಾಯಿ ಅವರು ತಮ್ಮ ಆರೋಪಗಳನ್ನು ಸಮರ್ಥಿಸುವ ಯಾವುದೇ ದಾಖಲೆಗಳಿಲ್ಲದೆ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಮಾಜಿ ಮುಖ್ಯಮಂತ್ರಿಯಂತಹ ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ. ಕೂಡಲೇ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದರು.

ನನ್ನ 40 ವರ್ಷಕ್ಕೂ ಅಧಿಕ ಸಾರ್ವಜನಿಕ ಜೀವನವನ್ನು ಅವರು ಕೂಡಾ ನೋಡಿದ್ದಾರೆ. ಆದರೆ ಭಾನುವಾರ ಅವರು ವೈಯಕ್ತಿಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿ ಆರೋಪಿಸಿರುವುದು ನೋವು ತಂದಿದೆ. ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ವ್ಯಕ್ತಿ ಯಾವುದೇ ವಿಷಯವನ್ನು ಹೇಳುವ ಮೊದಲು ವಾಸ್ತವಾಂಶಗಳನ್ನು ಪರಿಶೀಲಿಸಬೇಕು. ಆದರೆ ಬೊಮ್ಮಾಯಿ ಅವರು ಯಾವುದೇ ಪರಿಶೀಲನೆ ನಡೆಸದೇ ಹಸಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಇನ್ನುಳಿದ ಎಚ್.ಕೆ. ಪಾಟೀಲರೂ ಹಾಜರ್: ಹುಲಕೋಟಿ ಗ್ರಾಮದಲ್ಲಿ ಒಂದೇ ಹೆಸರಿನ ಇಬ್ಬರು ಎಚ್.ಕೆ. ಪಾಟೀಲರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಅವರವರ ಭಾವಚಿತ್ರ ಹಾಗೂ ವಿವರಗಳು ಸ್ಪಷ್ಟವಾಗಿ ದಾಖಲಾಗಿವೆ. ಹುಲಕೋಟಿ ಗ್ರಾಮದ ಬೂತ್ ಸಂಖ್ಯೆ 143ರ ಕ್ರಮ ಸಂಖ್ಯೆ 183ರಲ್ಲಿ ನನ್ನ ಹೆಸರಿದೆ. ಅದೇ ಬೂತ್‌ನ ಕ್ರಮ ಸಂಖ್ಯೆ 161ರಲ್ಲಿ ತಮ್ಮ ಸಹೋದರ ಸಂಬಂಧಿಯಾಗಿರುವರ ಹೆಸರಿದ್ದು, ಅವರು ಕೂಡಾ ಎಚ್.ಕೆ. ಪಾಟೀಲ ಅವರೇ. ಅದೇ ರೀತಿ ಬೂತ್ ಸಂಖ್ಯೆ 153 ಅಸುಂಡಿ ಗ್ರಾಮಕ್ಕೆ ಸಂಬಂಧಿಸಿದ್ದರೂ ಅದನ್ನು ಹುಲಕೋಟಿ ಎಂದು ಉಲ್ಲೇಖಿಸಿದ್ದಲ್ಲದೇ ಕ್ರಮ ಸಂಖ್ಯೆ 393ರಲ್ಲಿ ಎಚ್.ಕೆ. ಪಾಟೀಲರ ಹೆಸರಿದೆ ಎಂದಿದ್ದಾರೆ.

ಆದರೆ ಆ ಹೆಸರು ನನ್ನದಲ್ಲ, ಅಲ್ಲಿಯೂ ಒಬ್ಬರು ಎಚ್.ಕೆ. ಪಾಟೀಲ ಎನ್ನುವ ಬೇರೆ ಮತದಾರರಿದ್ದಾರೆ ಎಂದು, ಆ ಹೆಸರಿನ ವ್ಯಕ್ತಿಗಳನ್ನು ಖುದ್ಧು ಮಾಧ್ಯಮಗೋಷ್ಠಿಯಲ್ಲಿ ಪರಿಚಯಿಸಿ, ಅವರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಮತದಾರರ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ಮಾಡಿಸಿದ ಅವರು, ಬೊಮ್ಮಾಯಿ ಅವರು ಈ ವಾಸ್ತವಾಂಶವನ್ನು ಪರಿಶೀಲಿಸದೇ ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.

ಯಾವ ಚುನಾವಣೆ ಆಯೋಗದ ದಾಖಲೆ ಆಧರಿಸಿ ಆರೋಪ ಮಾಡಿದ್ದಾರೆ ಎಂಬುದನ್ನು ಅವರು ಕೂಡಲೇ ನಾಡಿನ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದು ಕೇವಲ ತಮ್ಮ ವಿರುದ್ಧವಲ್ಲ, ರೋಣ ಕ್ಷೇತ್ರದ ಜನರ ಬಗ್ಗೆಯೂ ಇಂಥ ಆರೋಪ ಮಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಜಿ.ಎಸ್. ಪಾಟೀಲ ಅವರಿಗೂ ಅವಮಾನ ಮಾಡಿದ್ದಾರೆ. ಈ ಹಿಂದೆ ವಿಧಾನಪರಿಷತ್ ಚುನಾವಣೆಯಲ್ಲಿ ಎಚ್.ಕೆ. ಪಾಟೀಲ ಎಂಬ ಹೆಸರಿನ ಮತ್ತೊಬ್ಬ ಅಭ್ಯರ್ಥಿಯನ್ನು ನನ್ನ ವಿರುದ್ಧ ಕಣಕ್ಕಿಳಿಸಲಾಗಿತ್ತು. ಒಂದೇ ಹೆಸರಿನ ವ್ಯಕ್ತಿಗಳು ಇರುವುದನ್ನು ಬೊಮ್ಮಾಯಿ ತಿಳಿದಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುವ ರೀತಿಯಲ್ಲಿ ಬಳಸಿಕೊಂಡು ತಮ್ಮ ವಿರುದ್ಧ ಆರೋಪ ಮಾಡಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಬೊಮ್ಮಾಯಿ

ಗದಗ: ​ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕುರಿತು ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿಯೇ ತೀವ್ರಗತಿಯಲ್ಲಿ ಪರಿಶೀಲನೆ ನಡೆಸಬೇಕು. ಈ ವಿಷಯದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ​ಮತಪಟ್ಟಿ (ವೋಟರ್ ಲಿಸ್ಟ್)ಯಲ್ಲಿರುವ ಅಧಿಕೃತ ದಾಖಲೆಗಳನ್ನು ಅನುಗುಣವಾಗಿಯೇ ಶನಿವಾರ ಎಚ್.ಕೆ. ಪಾಟೀಲ ಅವರ ಹೆಸರಿನಲ್ಲಿ ಮೂರು ಮತಗಳಿರುವ ಕುರಿತು ಹೇಳಿಕೆ ನೀಡಲಾಗಿತ್ತು. ಒಂದೇ ಕ್ಷೇತ್ರದಲ್ಲಿ, ಒಂದೇ ಊರಿನಲ್ಲಿ ಹಾಗೂ ಪಕ್ಕದ ಊರಿನಲ್ಲಿ ವ್ಯಕ್ತಿಯ ಹೆಸರು ಮತ್ತು ತಂದೆಯ ಹೆಸರು ಒಂದೇ ತರ ಇರುವುದರಿಂದ ಪಕ್ಷದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಆ ಮಾಹಿತಿಯ ಆಧಾರದ ಮೇಲೆಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ​ಈ ಗೊಂದಲಕ್ಕೆ ಸಂಬಂಧಿಸಿದಂತೆ ಎಚ್.ಕೆ. ಪಾಟೀಲ ಅವರು ಭಾನುವಾರ ನೀಡಿರುವ ಸ್ಪಷ್ಟೀಕರಣವನ್ನು ಚುನಾವಣಾ ಅಧಿಕಾರಿಗಳು ಸೂಕ್ತವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಬೇಕು. ಇದು ಕೇವಲ ಎಚ್.ಕೆ. ಪಾಟೀಲ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಒಂದೇ ಹೆಸರಿನಲ್ಲಿ 4ರಿಂದ 5 ಮತಗಳಿರುವ ಹಲವಾರು ಪ್ರಕರಣಗಳಿದ್ದು, ಈಗಾಗಲೇ 3- 4 ಉದಾಹರಣೆಗಳನ್ನು ನೀಡಲಾಗಿದೆ. ಮ್ಯಾಪಿಂಗ್ ಮಾಡಿದ ನಂತರವೂ ಇಂತಹ ತಪ್ಪುಗಳು ಮರುಕಳಿಸುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು ಹೇಳಿದರು.ನನ್ನ ಬಳಿ ಇದ್ದ ಮಾಹಿತಿಯನ್ನಷ್ಟೇ ಬಹಿರಂಗಪಡಿಸಿದ್ದೇನೆ ಹೊರತು, ಎಚ್.ಕೆ. ಪಾಟೀಲ ಅವರ ಮೇಲೆ ವೈಯಕ್ತಿಕವಾಗಿ ಯಾವುದೇ ಆಪಾದನೆ ಮಾಡಿಲ್ಲ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷಮೆ ಕೇಳುವಂತಹ ತಪ್ಪೇನೂ ನಡೆದಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಟೆಕ್ ಶೌಚಾಲಯ ಅಪೂರ್ಣ
ತುಂಗಭದ್ರಾ ಜಲಾಶಯದ ಒಡಲು ಖಾಲಿ