ಎಸ್. ನಾರಾಯಣ್ ಮುನಿರಾಬಾದ
ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದ ಒಡಲು ಖಾಲಿಯಾಗಿದ್ದು, ಜುಲೈ ಕಳೆದರೂ ಜಲಾಶಯಕ್ಕೆ ಒಳಹರಿವು ಬರುತ್ತಿಲ್ಲ. ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಜಲಾಶಯದ ನೀರಿನ ಅವಲಂಬಿತರಾದ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರ ಬದುಕು ಅಭದ್ರವಾಗಿದೆ.ಸಾಮಾನ್ಯವಾಗಿ ಜಲಾಶಯಕ್ಕೆ ಜೂನ್ ತಿಂಗಳಲ್ಲಿ ಒಳಹರಿವು ಆರಂಭಗೊಂಡು ಜುಲೈಗೆ ಅರ್ಧ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಈ ವರ್ಷ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆ ಇದ್ದು, ಜೂನ್ 19ರ ವರೆಗೆ ಜಲಾಶಯಕ್ಕೆ ಪ್ರತಿನಿತ್ಯ ಕೇವಲ 300ರಿಂದ 500 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಜು. 5ರಂದು ಜಲಾಶಯದ ನೀರಿನ ಮಟ್ಟ 9.5 ಟಿಎಂಸಿಯಷ್ಟಿದೆ. ಅಂದರೆ ಜಲಾಶಯಕ್ಕೆ ನೀರಿನ ಹರಿವು ಇಲ್ಲ ಎಂಬುದು ಸಾಬೀತಾಗಿದೆ.
ದಾಖಲೆ ನಿರ್ಮಿಸಿದ ತುಂಗಭದ್ರಾ ಜಲಾಶಯ: ಸಾಮಾನ್ಯವಾಗಿ ಹೆಚ್ಚಿನ ಒಳಹರಿವು ಹಾಗೂ ಹೊರ ಹರಿವಿನಲ್ಲಿ ದಾಖಲೆ ನಿರ್ಮಿಸುತ್ತಿದ್ದ ತುಂಗಭದ್ರಾ ಜಲಾಶಯ ಪ್ರಸಕ್ತ ಸಾಲಿನಲ್ಲಿ ಜಲಾಶಯದ ಇತಿಹಾಸದಲ್ಲಿ ಶೂನ್ಯ ಒಳಹರಿವಿನಲ್ಲಿ ದಾಖಲೆ ನಿರ್ಮಿಸಿದೆ.ಜೂ. 20ರಿಂದ ಜು. 5ರ ವರೆಗೂ (16 ದಿನಗಳು) ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬಂದಿಲ್ಲ. ಜಲಾಶಯಕ್ಕೆ ಒಳಹರಿವು ಶೂನ್ಯಮಯವಾಗಿದೆ. ಇದು ಭೀಕರ ಪರಿಸ್ಥಿತಿಯ ಕೈಗನ್ನಡಿಯಾಗಿದೆ. ಜಲಾಶಯಕ್ಕೆ ಮಲೆನಾಡಿನ ಮಳೆಯ ಆಸರೆಯಾಗಿದ್ದು, ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಮಳೆಯಾಗದ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ಜಲಾಶಯವು ಕಳೆದ 16 ದಿನದಿಂದ ಶೂನ್ಯ ಒಳ ಹರಿವಿನಲ್ಲಿದೆ.
ಕಳೆದ ವರ್ಷ ಜು. 4ರಂದು ತುಂಗಭದ್ರಾ ಜಲಾಶಯ ಭರ್ತಿಯಾಗಿತ್ತು ಹಾಗೂ ಜಲಾಶಯದ ಗೇಟ್‌ಗಳ ಮೂಲಕ ನದಿಗೆ ನೀರನ್ನು ಹರಿಸಲಾಗಿತ್ತು. ಕಳೆದ ವರ್ಷ ಜು. 5ರಂದು ತುಂಗಭದ್ರಾ ಜಲಾಶಯಕ್ಕೆ 73,000 ಕ್ಯುಸೆಕ್ ನೀರಿನ ಒಳಹರಿವು ಇತ್ತು. ಜಲಾಶಯದಿಂದ ನದಿಗೆ 64 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗಿದ್ದನ್ನು ಸ್ಮರಿಸಬಹುದು.
ಸೂಪರ ಎಲ್ ನಿನೋ ಪ್ರಸಕ್ತ ದೇಶದ ಮೇಲೆ ಪ್ರಭಾವ ಬೀರಿದೆ. ಇದರ ಪ್ರಭಾವದಿಂದ ಸತತ 2ರಿಂದ 3 ವರ್ಷಗಳ ಕಾಲ ಬರಗಾಲ ಸಂಭವಿಸಲಿದೆ ಎಂದು ತುಂಗಭದ್ರಾ ಮಂಡಳಿಯ ಮಾಜಿ ಅಧಕ್ಷ ರಂಗಾರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.
ಆರ್ಥಿಕತೆ ಮೇಲೆ ಭಾರಿ ಪರಿಣಾಮ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಭಾರಿ ಕೊರತೆ ಕಾಣಿಸಿಕೊಂಡ ಹಿನ್ನೆಲೆ ನೀರಾವರಿ ಇಲಾಖೆ ಅಧಿಕಾರಿಗಳು ಮುಂಗಾರು ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ, ಜಲಾಶಯದ ನೀರನ್ನು ಕುಡಿಯಲು ಮಾತ್ರ ಬಳಸಲಾಗುವುದು ಕಾರಣ ರೈತರು ನಾಟಿ ಮಾಡಬಾರದು ಎಂಬ ಸುತ್ತೋಲೆ ಹೊರಡಿಸಿದ್ದಾರೆ.ಅಚ್ಚುಕಟ್ಟು ಪ್ರದೇಶದಲ್ಲಿ 20 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಹಾಗೂ ಇತರ ಬೆಳೆ ಬೆಳೆಯಲಾಗುತ್ತದೆ. ಆಂಧ್ರಪ್ರದೇಶದ ಕಡಪ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುತ್ತಾರೆ. ಕಳೆದ ವರ್ಷ ಜಲಾಶಯಕ್ಕೆ ಗೇಟ್ ಅಳವಡಿಸಲು ನಿರ್ಧಾರ ಮಾಡಿದ ಹಿನ್ನೆಲೆ ಅಚ್ಚುಕಟ್ಟು ಪ್ರದೇಶದ ರೈತರು ಹಿಂಗಾರು ಬೆಳೆ ಬೆಳೆಯದೆ ತ್ಯಾಗ ಮಾಡಿದರು.
ನಾಲ್ಕು ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಹಾಗೂ ಆಂಧ್ರ ಮತ್ತು ತೆಲಂಗಾಣದ ಕಡಪ ಕರ್ನೂಲ್ ಅನಂತಪುರ ಆರ್ಥಿಕತೆ ಹಾಗೂ ಜನರ ಜೀವನ ಮಟ್ಟದ ಮೇಲೆ ಭಾರಿ ಪರಿಣಾಮ ಆಗಲಿದೆ.ಕಳೆದ ವರ್ಷ ಜು. 2ರಂದು ತುಂಗಭದ್ರಾ ಜಲಾಶಯದ ವಿವಿಧ ಕಾಲುವೆಗಳಲ್ಲಿ ನೀರನ್ನು ಹರಿಸಲಾಗಿತ್ತು. ಆದರೆ ಈ ಬಾರಿ ತುಂಗಭದ್ರಾ ಜಲಾಶಯ ಖಾಲಿ ಇದೆ. ನಾವು ಆಗಸ್ಟ್ ತಿಂಗಳ ಅಂತ್ಯದವರೆಗೆ ಕಾದು ನೋಡುತ್ತೇವೆ, ಒಂದು ವೇಳೆ ಮುಂಗಾರು ಬೆಳೆಗೆ ನೀರು ಲಭ್ಯವಾಗದಿದ್ದರೆ ಸರ್ಕಾರವು ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಪರಿಹಾರ ಘೋಷಿಸಬೇಕು, ಇಲ್ಲದಿದ್ದರೆ ರಾಜ್ಯ ವ್ಯಾಪಿ ಹೋರಾಟ ಮಾಡಲಾಗುವುದು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.