ಕಾರವಾರದಲ್ಲಿ ಮೇ 4 ರಿಂದ ಅದ್ಧೂರಿ ಕರಾವಳಿ ಉತ್ಸವ

KannadaprabhaNewsNetwork |  
Published : Apr 23, 2025, 12:34 AM IST
ಪೂರ್ವಭಾವಿ ಸಭೆ ನಡೆಯಿತು.  | Kannada Prabha

ಸಾರಾಂಶ

ಉದ್ಘಾಟನೆ ಕಾರ್ಯಕ್ರಮಕ್ಕೆ ಮುನ್ನ ರಾಜ್ಯದ ಎಲ್ಲ ಪ್ರಕಾರಗಳ ಕಲೆಗಳನ್ನು ಬಿಂಬಿಸುವ ಕಲಾವಿದರಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ

ಕಾರವಾರ: ಕಾರವಾರದ ರವೀಂದ್ರನಾಥ್ ಟಾಗೂರ್ ಕಡಲತೀರದಲ್ಲಿ ಮೇ 4ರಿಂದ 5 ದಿನಗಳ ಕಾಲ ಅದ್ಧೂರಿಯಾಗಿ ಕರಾವಳಿ ಉತ್ಸವ ಆಯೋಜಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇ 4ರಂದು ಸಂಜೆ ನಡೆಯುವ ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೇರಿದಂತೆ ರಾಜ್ಯದ ಪ್ರಮುಖ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಮೇ 4 ರಂದು ಸಂಜೆ ಸೋನು ನಿಗಮ್, 5ರಂದು ಇಂಡಿಯನ್ ಐಡಲ್ ಖ್ಯಾತಿಯ ಮೊಹಮದ್ ದಾನಿಶ್, 6ರಂದು ಮಿಕಾ ಸಿಂಗ್, 7 ರಂದು ಅನನ್ಯ ಭಟ್ ಮತ್ತು ತಂಡ, 8 ರಂದು ಶಂಕರ್ ಮಹಾದೇವನ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕಲಾವಿದರಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಉದ್ಘಾಟನೆ ಕಾರ್ಯಕ್ರಮಕ್ಕೆ ಮುನ್ನ ರಾಜ್ಯದ ಎಲ್ಲ ಪ್ರಕಾರಗಳ ಕಲೆಗಳನ್ನು ಬಿಂಬಿಸುವ ಕಲಾವಿದರಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ ಎಂದರು.

ಕರಾವಳಿ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿಯೇ ಕರಾವಳಿ ರನ್ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ, ಮೀನುಗಾರರಿಗಾಗಿ ದೋಣಿ ಸ್ಪರ್ಧೆ, ಕರಾವಳಿ ಆಹಾರ ತಯಾರಿಕಾ ಸ್ಪರ್ಧೆ, ವಿವಿಧ ಇಲಾಖೆಗಳು, ಜನಪ್ರತಿನಿಧಿಗಳ ತಂಡಗಳ ಕಬಡ್ಡಿ ಸ್ಪರ್ಧೆ, ಸಾಕು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಸಾಕು ಪ್ರಾಣಿಗಳ ಅಲಂಕಾರ ಸ್ಪರ್ಧೆ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಲ್ಇಡಿ ಗಾಳಿಪಟ ಪ್ರದರ್ಶನ ನಡೆಯಲಿದೆ ಎಂದರು.

ಕರಾವಳಿ ಉತ್ಸವದ ಅವಧಿಯಲ್ಲಿ ಕಾರವಾರದ ಎಲ್ಲ ಸರ್ಕಾರಿ ಕಟ್ಟಡಗಳು ಮತ್ತು ಖಾಸಗಿ ವಾಣಿಜ್ಯ ಕಟ್ಟಡಗಳನ್ನು ಆಕರ್ಷಕವಾಗಿ ದೀಪಾಲಂಕಾರ ಮಾಡಬೇಕು ಎಂದರು.

ಕರಾವಳಿ ಉತ್ಸವದ ಯಶಸ್ವಿಗಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ 15ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಅತ್ಯಂತ ಯಶಸ್ವಿಗೊಳಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಜಿಪಂ ಸಿಇಒ ಈಶ್ವರ ಕಾಂದು, ಎಸ್ಪಿ ನಾರಾಯಣ ಎಂ., ಡಿಎಫ್ಒ ರವಿಶಂಕರ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು