ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ "ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ " ಸಹಯೋಗದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಸುವರ್ಣ ಆರೋಗ್ಯ ಶಿಬಿರಕ್ಕೆ ಭಾನುವಾರ ತೆರೆ ಎಳೆಯಲಾಯಿತು.
ಶಿಬಿರದಲ್ಲಿ ಭಾನುವಾರ ಬೆಳಗ್ಗೆ ಕೋವಿಡ್ ನಂತರದ ಹೃದಯಾಘಾತದ ಪ್ರಕರಣ ಹೆಚ್ಚಳ ವಿಷಯ ಕುರಿತು ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ ಸಂವಾದ ನಡೆಸಿದರು. ಕ್ಯಾನ್ಸರ್ ಚಿಕಿತ್ಸಾ ವಿಧಾನದ ಕುರಿತು ಡಾ. ಪವನಕುಮಾರ, ನಾರಾಯಣ ಹೃದಯಾಲಯದ ಡಾ. ವಿವೇಕಾನಂದ ಗಜಪತಿ ಅವರು ಚಳಿಗಾಲದಲ್ಲಿ ಹೃದಯ ಸ್ತಂಭನ ಕುರಿತು ಸಂವಾದ ನಡೆಸಿದರು.
ಎರಡು ದಿನಗಳ ಕಾಲ ಆಯೋಜಿಸಿದ ಸುವರ್ಣ ಆರೋಗ್ಯ ಶಿಬಿರದಿಂದ ಈ ಭಾಗದ ಜನರಿಗೆ ಹೆಚ್ಚಿನ ಅನಕೂಲವಾಗಿದೆ. ಇದೇ ರೀತಿ ಪ್ರತಿ ವರ್ಷವೂ ಆರೋಗ್ಯ ಶಿಬಿರ ಆಯೋಜಿಸುವಂತಾಗಲಿ ಎಂದು ಹಳೇ ಹುಬ್ಬಳ್ಳಿ ನಿವಾಸಿ ಅಮರೇಗೌಡ ಪಾಟೀಲ ಹೇಳಿದರು.ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಂಸ್ಥೆಯ ಕಾರ್ಯ ಶ್ಲಾಘನೀಯ. ಉಳ್ಳವರು ಮಾತ್ರ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳುವ ಕಾಲದಲ್ಲಿ ಉಚಿತವಾಗಿ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಧಾರವಾಡ ತಾಲೂಕಿನ ಬಾಡ ಗ್ರಾಮದ ನಿವಾಸಿ ಅಕ್ಕಮ್ಮ ಜೋಡರಳ್ಳಿ ಹೇಳಿದರು,
ಮೊದಲ ಬಾರಿಗೆ ಇಂತಹ ಬೃಹತ್ ಆರೋಗ್ಯ ಶಿಬಿರ ಆಯೋಜಿಸಿರುವುದು ಈ ಭಾಗದ ಜನರಿಗೆ ಹೆಚ್ಚಿನ ಅನಕೂಲವಾಗಿದೆ. ಜನರ ಆರೋಗ್ಯ ಕಾಳಜಿ ಗಮನದಲ್ಲಿಟ್ಟುಕೊಂಡು ಶಿಬಿರ ಆಯೋಜಿಸಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸುವೆ ಎಂದು ಅಳಗವಾಡಿ ನಿವಾಸಿ ಈರಮ್ಮ ಹಿರೇಮಠ ಹೇಳಿದರು.ಕೇವಲ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡದೇ ಜನರ ಆರೋಗ್ಯ ಕಾಳಜಿ ಗಮನದಲ್ಲಿಟ್ಟುಕೊಂಡು ಆರೋಗ್ಯ ಶಿಬಿರ ಆಯೋಜಿಸಿರುವ ಸಂಸ್ಥೆ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿ ಪರಸಪ್ಪ ರಿತ್ತಿ ತಿಳಿಸಿದರು.ಮೊದಲ ಬಾರಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದರೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಇದೇ ಮಾದರಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸುವಂತಾಗಲಿ ಎಂದು ಸವಿತಾ ಧಾರವಾಡದ ನಿವಾಸಿ ಕಡಕೋಳ ತಿಳಿಸಿದರು.