ಕನ್ನಡಪ್ರಭ ವಾರ್ತೆ ಕಲಬುರಗಿ
ಬೆಂಗಳೂರಿನಿಂದ ಕಲಬುರಗಿಗೆ ಬೆಳಗಿನ ವಿಮಾನದಿಂದ ಬಂದಿಳಿದಿದ್ದ ಜಗದೇವ ಅವರಿಗೆ ಕಾರ್ಯಕರ್ತರೆಲ್ಲರು ಸೇರಿಕೊಂಡು ಏರ್‌ಪೋರ್ಟ್‌ನಿಂದಲೇ ಬಹಿರಂಗ ಮೆರವಣಿಗೆಯಲ್ಲಿ ಸ್ವಾಗತ ಕೋರಿದರು. ಅಲ್ಲಿಂದ ನಡೆದ 3 ಗಂಟೆಗಳ ಮೆರವಣಿಗೆ ಕಾಂಗ್ರೆಸ್ ಕಚೇರಿಗೆ ಬಂದು ತಲುಪಿದಾಗ ಮ.1ಗಂಟೆಯಾಗಿತ್ತು.
ಅಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶುರುವಾದ ಸಮಾರಂಭದಲ್ಲಿ ಭಸವಣ್ಣನವರ ಪುತ್ಥಳಿ ನೀಡಿ ಜಗದೇವ ಗುತ್ತೇದಾರ್ ಅವರಿಗೆ ಸಚಿವರಾದ ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಎಂವೈ ಪಾಟೀಲ್, ಖನೀಜ್ ಫಾತೀಮಾ, ತಿಪ್ಪಣ್ಣ ಕಮಕನೂರ್, ಕೆಪಿಸಿಸಿ ಉಪಾಧ್ಯಕ್ಷ ಸುಭಾಸ ರಾಠೋಡ, ಪ್ರ. ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ್, ಭಾಗಣಗೌಡ ಪಾಟೀಲ್ ಸಂಕನೂರ್, ಭೀಮರಾವ ಟಿಟಿ, ನಾರಾಯಣರಾವ ಕಾಳೆ, ಬಾಬೂರಾವ ಜಾಗಿರ್ದಾರ್ ಸೇರಿದಂತೆ ಅನೇಕರು ಶುಭ ಕೋರಿದರು.ಜಗದೇವ ಗುತ್ತೇದಾರ್ ಅವರ ಪಕ್ಷ ನಿಷ್ಠೆ ಕೊಂಡಾಡಿದ ಶಾಸಕ ಅಲ್ಲಂಪ್ರಭು ಪಾಟೀಲ್ ಪಕ್ಷ ಸಂಘಟನೆಗೆ ದುಡಿದವರಿಗೆ ಎಂತಹ ಕೊಡುಗೆ ವರಿಷ್ಠರು ಕೊಡುತ್ತಾರೆ ಎನ್ನಲು ಜಗದೇವ ಗುತ್ತೇದಾರ್ ಅವರೇ ಸಾಕ್ಷಿ ಎಂದರಲ್ಲದೆ ತಾವು, ಗುತ್ತೇದಾರ್, ಶರಣ ಪಾಟೀಲ್ ಸರಿದಂತೆ ಎಲ್ಲರು ವಿದ್ಯಾರ್ಥಿ ಸಂಘಟನೆಯಿಂದಲೇ ಒಂದಾಗಿ ರಾಜಕೀಯದಲ್ಲಿ ಬಂದ ಬಗೆ ವಿವರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾವು ಸ್ಥಾನಮಾನಗಳಿಗಾಗಿ ಕಾಯಲೇಬೇಕು. ಎಐಸಿಸಿ ಅಧ್ಯಕ್ಷರಾಗಿರುವ ಡಾ. ಖರ್ಗೆಯವರು ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಪರಿಪಾಠ ಹಾಕಿಕೊಂಡವರು. ಅವರ ನೇತೃತ್ವದಲ್ಲಿ ಎಲ್ಲರಿಗೂ ಉತ್ತಮ ಸ್ಥಾನಮಾನ ದೊರಕಲಿ, ಕಾಂಗ್ರೆಸ್ ಬಲಗೊಳ್ಳುತ್ತ ಸಾಗಲಿ ಎಂದು ಹಾರೈಸಿದರು.
ಸಣ್ಣ ಕೈಗಾರಿಕೆ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಮಾತನಾಡುತ್ತ ಜಗದೇವ ಗುತ್ತೇದಾರರ ತಾಳ್ಮೆ, ಪಕ್ಷ ನಿಷ್ಠೆ ಹೈಕಮಾಂಡ್ ಗುರುತಿಸಿದೆ, ಪಕ್ಷದಲ್ಲಿ ಕೆಳಹಂತದಲ್ಲಿ ಯಾರೂ ದುಡಿಯವರೋ ಅವರಿಗೆ ಹೈಕಮಾಂಡ್ ಗೌರವಿಸುತ್ತದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಸ ರಾಠೋಡ, ಪ್ರ. ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಬಾಬೂರಾವ ಜಾಗಿರ್ದಾರ್ ಸೇರಿದಂತೆ ಅನೇಕರ ಸಾಮೂಹಿಕ ನೇತೃತ್ವದಲ್ಲಿ ನಡೆದ ಸನ್ಮಾನ ಸಮಾರಂಭ 2 ಗಂಟೆಗೂ ಹೆಚ್ಚುಕಾಲ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದು ಜಗದೇವ ಗುತ್ತೇದಾರ್ ಅವರಿಗೆ ಅಭಿನಂದಿಸಿದರು.