ಹಿಂದೂ ಮಹಾಗಣಪತಿಗೆ ಅದ್ಧೂರಿ ವಿದಾಯ

KannadaprabhaNewsNetwork |  
Published : Oct 05, 2026, 02:00 AM IST
ಹುಬ್ಬಳ್ಳಿ ಅಶೋಕ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ಅದ್ಧೂರಿ ವಿಸರ್ಜನಾ ಮೆರವಣಿಗೆ ನಡೆಯಿತು. ಈ ವೇಳೆ ಯುವಕ-ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. | Kannada Prabha

ಸಾರಾಂಶ

ಇಲ್ಲಿನ ಅಶೋಕನಗರ ಹಾಗೂ ನವನಗರದಲ್ಲಿ 21 ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಹಿಂದೂ ಮಹಾಗಣಪತಿ ಮೂರ್ತಿಗಳನ್ನು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.

ಹುಬ್ಬಳ್ಳಿ: ಇಲ್ಲಿನ ಅಶೋಕನಗರ ಹಾಗೂ ನವನಗರದಲ್ಲಿ 21 ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಹಿಂದೂ ಮಹಾಗಣಪತಿ ಮೂರ್ತಿಗಳನ್ನು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.

ನವನಗರದ ಪಂಚಾಕ್ಷರಿ ನಗರ ಹಾಗೂ ಪುನೀತ್‌ರಾಜಕುಮಾರ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಪ್ರತ್ಯೇಕ ಎರಡು ಹಿಂದೂ ಮಹಾಗಣಪತಿ ಮೂರ್ತಿಗಳು ಮತ್ತು ಅಶೋಕನಗರದ ಗಣೇಶ ಮೂರ್ತಿಗೆ 21 ದಿನಗಳ ಕಾಲ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಗಣೇಶನ ದರ್ಶನಕ್ಕೆ ನೂರಾರು ಭಕ್ತರು ಆಗಮಿಸುತ್ತಿದ್ದರು.

ವಿಸರ್ಜನೆಗೂ ಮುನ್ನ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಗಣೇಶನಿಗೆ ಅಲಂಕರಿಸಿದ್ದ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆಯೂ ನಡೆಯಿತು.

ನವನಗರದ ಗಣೇಶ ಮೂರ್ತಿಗಳ ಮೆರವಣಿಗೆಯು ಕರ್ನಾಟಕ ವೃತ್ತ, ಕ್ಯಾನ್ಸರ್ ಆಸ್ಪತ್ರೆ, ಭೈರಿದೇವರಕೊಪ್ಪ ಮೂಲಕ ಉಣಕಲ್ಲ ಕೆರೆಗೆ ತಂದು ವಿಸರ್ಜಿಸಲಾಯಿತು. ಅಶೋಕನಗರದ ಗಣೇಶ ಮೂರ್ತಿಯ ಮೆರವಣಿಗೆಯು ದೇಶಪಾಂಡೆನಗರ, ಕಾಟನ್ ಮಾರ್ಕೆಟ್‌ ಹಾಗೂ ಹೊಸೂರು ವೃತ್ತದ ಮೂಲಕ ಸಾಗಿ ಹೊಸೂರಿನ ಮಹಾನಗರ ಪಾಲಿಕೆ ಬಾವಿಯಲ್ಲಿ ವಿಸರ್ಜಿಸಲಾಯಿತು.

ಅಲಂಕೃತ ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳಿಗೆ ಹೂವಿನ ಹಾರ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗಾರ ಮಾಡಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಡಿಜೆ ಸಂಗೀತಕ್ಕೆ ಯುವಕರು ಕುಣಿದು ಸಂಭ್ರಮಿಸಿದರು.ಹುಬ್ಬಳ್ಳಿಗಿಂದು ನಟ ಶಿವರಾಜ್‌ಕುಮಾರ್

ಹುಬ್ಬಳ್ಳಿ: ಪವನ್‌ ಒಡೆಯರ್ ನಿರ್ದೇಶನದ ಹಾಗೂ ಕೆವಿಎನ್‌ ಸಂಸ್ಥೆ ನಿರ್ಮಾಣದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ "ಬೇಲ್ " ಚಿತ್ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ನಟ ಶಿವರಾಜ್‌ಕುಮಾರ್ ಅವರ ವಿಜಯಯಾತ್ರೆ ಅ. 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.ನಗರದ ಡಾ. ರಾಜ್‌ಕುಮಾರ್ ರಸ್ತೆ (ಕೊಪ್ಪೀಕರ್ ರಸ್ತೆ)ಯ ಪದ್ಮಾ ಟಾಕೀಸ್ ವೃತ್ತದಿಂದ ಅಪ್ಸರಾ ಚಿತ್ರಮಂದಿರದ ವರೆಗೆ ಬೆಳಗ್ಗೆ 10.30ಕ್ಕೆ ಸಾರೋಟದಲ್ಲಿ ಶಿವರಾಜ್‌ಕುಮಾರ್ ಅವರನ್ನು ಕರೆದೊಯ್ದು ಭವ್ಯ ಮೆರವಣಿಗೆ ನಡೆಸಲಾಗುವುದು. ಈ ವೇಳೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.ಉತ್ತರ ಕರ್ನಾಟಕದ ಬಳ್ಳಾರಿ, ಹೊಸಪೇಟೆ ಸೇರಿದಂತೆ ಹಲವು ಕಡೆ ಈಗಾಗಲೇ ವಿಜಯಯಾತ್ರೆ ಯಶಸ್ವಿಯಾಗಿ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಾಜಿ ನಿರ್ದೇಶಕ ಶಿವಾನಂದ ಮುತ್ತಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ತುಂಗಭದ್ರಾ ರೈತ ಸಂಘ ಆಗ್ರಹ
ಕಾಣೆಯಾದ ಮಕ್ಕಳ ಪತ್ತೆಗೆ ಪೊಲೀಸ್ ಇಲಾಖೆ ಚುರುಕು