ಹಂಪಿಯಲ್ಲಿ ಸಡಗರದ ಜೋಡಿ ರಥೋತ್ಸವ

KannadaprabhaNewsNetwork |  
Published : Apr 24, 2024, 02:18 AM IST
23ಎಚ್‌ಪಿಟಿ2ಹಂಪಿಯಲ್ಲಿ ಮಂಗಳವಾರ ಶ್ರೀಪಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಶ್ರೀಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಹಂಪಿಯ ರಥಬೀದಿಯಲ್ಲಿ ಮಂಗಳವಾರ ಸಂಜೆ ಶ್ರದ್ಧಾಭಕ್ತಿ, ಸಂಭ್ರಮದಿಂದ ನಡೆಯಿತು. | Kannada Prabha

ಸಾರಾಂಶ

ಸಾವಿರಾರು ಭಕ್ತರ ಹರ್ಷೋದ್ಘಾರ ನಡುವೆ ಜೋಡಿ ರಥೋತ್ಸವ ನೆರವೇರಿತು. ಜಾತ್ರೆಯಲ್ಲಿ ಭಕ್ತರು ಉತ್ತತ್ತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಕಮಲಾಪುರ ಮತ್ತು ಹೊಸಪೇಟೆಯ ಏಳುಕೇರಿಯ ಯುವಕರು ಸನ್ನೆ ಹಾಕಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಶ್ರೀಪಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಶ್ರೀಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಹಂಪಿಯ ರಥಬೀದಿಯಲ್ಲಿ ಮಂಗಳವಾರ ಸಂಜೆ ಶ್ರದ್ಧಾಭಕ್ತಿ, ಸಂಭ್ರಮದಿಂದ ನಡೆಯಿತು.

ಸಾವಿರಾರು ಭಕ್ತರ ಹರ್ಷೋದ್ಘಾರ ನಡುವೆ ಜೋಡಿ ರಥೋತ್ಸವ ನೆರವೇರಿತು. ಜಾತ್ರೆಯಲ್ಲಿ ಭಕ್ತರು ಉತ್ತತ್ತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಕಮಲಾಪುರ ಮತ್ತು ಹೊಸಪೇಟೆಯ ಏಳುಕೇರಿಯ ಯುವಕರು ಸನ್ನೆ ಹಾಕಿದರು. ಶ್ರೀಪಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಶ್ರೀಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವದ ಹಿನ್ನೆಲೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಶ್ರೀಚಂದ್ರಮೌಳೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಸಂಪ್ರದಾಯದಂತೆ ಶ್ರೀವಿದ್ಯಾರಣ್ಯ ಸ್ವಾಮೀಜಿ ಕೂಡ ಸಾಗಿದರು. ಹಂಪಿಯಲ್ಲಿ ಬ್ರಹ್ಮರಥೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಶ್ರೀಪಂಪಾವಿರೂಪಾಕ್ಷೇಶ್ವರ ಸ್ವಾಮಿಯ ಕಲ್ಯಾಣೋತ್ಸವ, ಶ್ರೀ ವಾಲ್ಮೀಕಿ ವಿರಚಿತ ಶ್ರೀಮದ್‌ ರಾಮಾಯಣ ಪಾರಾಯಣ ಕೂಡ ನಡೆಯಿತು. ಬ್ರಹ್ಮರಥೋತ್ಸವದ ಮಡಿತೇರು, ಧ್ವಜ, ಬಾವುಟ ಹರಾಜು ನಡೆಯಿತು.

ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯರು ತಮ್ಮ ಪಟ್ಟಾಭಿಷೇಕ ಸಮಯದಲ್ಲಿ ಕಾಣಿಕೆಯಾಗಿ ನೀಡಿದ್ದ ರತ್ನಖಚಿತ ಸುವರ್ಣ ಮುಖ ಕೀರಿಟದಿಂದ ಶ್ರೀ ವಿರೂಪಾಕೇಶ್ವರ ಮೂರ್ತಿಯನ್ನು ಅಲಂಕರಿಸಲಾಗಿತು.

ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಶ್ರೀವಿರೂಪಾಕ್ಷೇಶ್ವರ ದೇಗುಲದಿಂದ ಸಾಲುಮಂಟಪ ಹೊಂದಿರುವ ರಥಬೀದಿಯಲ್ಲಿ ಜೋಡಿ ರಥಗಳು ಸಾಗಿ ಸ್ವಸ್ಥಾನಕ್ಕೆ ಮರಳಿದವು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹರ್ಷೋದ್ಗಾರ ಮೊಳಗಿಸಿದರು.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಗದಗ, ಹಾವೇರಿ ಇತರೆ ಜಿಲ್ಲೆಗಳ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರವೇ ಹಂಪಿ ಕಡೆ ಎತ್ತಿನ ಬಂಡಿ, ಆಟೋ, ಟಂಟಂ, ಕಾರು, ಟ್ರ್ಯಾಕ್ಸ್‌ ಸೇರಿದಂತೆ ಇತರೆ ವಾಹನಗಳಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ತುಂಗಭದ್ರಾ ನದಿಯಲ್ಲಿ ನಸುಕಿನಲ್ಲೇ ಸ್ನಾನ-ಸಂಧ್ಯಾವಂದನೆ ಮುಗಿಸಿದರು. ಬಳಿಕ ಸರದಿ ಸಾಲಿನಲ್ಲಿ ಶ್ರೀವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದರು. ಹೂಹಣ್ಣು ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ