ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ "ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ " ಸಹಯೋಗದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಸುವರ್ಣ ಆರೋಗ್ಯ ಶಿಬಿರಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು.
ಶಿಬಿರದಲ್ಲಿ ನಾರಾಯಣ ಹೃದಯಾಲಯ, ವಿಹಾನ್ ಆಸ್ಪತ್ರೆ, ಸುಚಿರಾಯು ಆಸ್ಪತ್ರೆ, ವಿ ಕೇರ್, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ಕೆಎಲ್‌ಇ ಮೆಡಿಕಲ್ ಕಾಲೇಜು, ಎಚ್‌ಸಿಜಿ, ಡಾ. ರವಿ ಪಾಟೀಲ ಹೆಲ್ತ್ ಇನ್‌ಸ್ಟ್ಯೂಟ್, ಗುಡುಚಿ ಆಯುರ್ವೇದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯುನಿವರ್ಸಿಟಿ, ಸಂತೋಷ ಲಾಡ್ ಫೌಂಡೇಶನ್, ಸೂರಣ್ಣವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸಕ್ರಾ ವರ್ಡ್ ಆಸ್ಪತ್ರೆ, ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಸೇರಿದಂತೆ ಹಲವು ಸಂಸ್ಥೆಗಳು ಶಿಬಿರದಲ್ಲಿ ಪಾಲ್ಗೊಂಡು ಸಾವಿರಾರು ರೋಗಿಗಳಿಗೆ ಚಿಕಿತ್ಸೆ, ಪರಿಹಾರೋಪಾಯಗಳನ್ನು ನೀಡಿದರು.
ಧಾರವಾಡ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ ಜನರು ಆರೋಗ್ಯ ಶಿಬಿರದಲ್ಲಿ ಯಲುಬು, ಕೀಲು, ಬಿಪಿ, ರಕ್ತ, ಹೃದಯ, ಕಣ್ಣು ಸೇರಿದಂತೆ ಹಲವು ತಪಾಸಣೆಯ ಸದುಪಯೋಗ ಪಡೆದರು. ಬೆಳಗ್ಗೆಯಿಂದ ಆರಂಭವಾದ ತಪಾಸಣೆಯು ಸಂಜೆ 7 ಗಂಟೆಯ ವರೆಗೂ ನಡೆಯಿತು. ಭಾನುವಾರವೂ ಶಿಬಿರ ನಡೆಯಲಿದೆ.ಹುಬ್ಬಳ್ಳಿ ಭಾಗದಲ್ಲಿ ಮಾದರಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಬಂದರೆ ಎಲ್ಲ ಹಂತದ ಚಿಕಿತ್ಸೆ, ಪರಿಹಾರೋಪಾಯ ಪಡೆದುಕೊಳ್ಳಲು ಸಹಕಾರಿಯಾಗಿದೆ. ಇಂತಹ ಶಿಬಿರಗಳು ಹೆಚ್ಚು ನಡೆಯಲಿ ಎಂದು ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿ ದದ್ದುಸಾಬ ಜಕಾತಿ ತಿಳಿಸಿದರು.,
"ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ " ಸಹಯೋಗದೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿರುವುದು ಅಭಿನಂದನಾರ್ಹ. ಪ್ರತಿ ವರ್ಷವೂ ಇಂತಹ ಶಿಬಿರ ಆಯೋಜಿಸುವಂತಾಗಲಿ ಎಂದು ಹಳೇಹುಬ್ಬಳ್ಳಿ ನಿವಾಸಿ ಸಾವಿತ್ರಮ್ಮ ಗಾರಲಪೇಟ ಹೇಳಿದರು.ಮಾಧ್ಯಮ ಸಂಸ್ಥೆಗಳು ಕೇವಲ ಪತ್ರಿಕೋದ್ಯಮಕ್ಕೆ ಮೀಸಲಾಗಿರದೇ ಜನರ ಆರೋಗ್ಯ ಕಾಳಜಿಗೆ ಆದ್ಯತೆ ನೀಡಿರುವುದನ್ನು ಕಂಡು ತುಂಬಾ ಸಂತಸವಾಗುತ್ತಿದೆ. ಇತರೆ ಮಾಧ್ಯಮ ಸಂಸ್ಥೆಗಳಿಗೆ ಈ ಶಿಬಿರ ಮಾದರಿಯಾಗಿದೆ ಎಂದು ಧಾರವಾಡ ತಾಲೂಕಿನ ಬಾಡ ನಿವಾಸಿ ಕಲ್ಲವ್ವ ಅಮರಗೋಳ ಹೇಳಿದರು.