ನಾಪೋಕ್ಲು : ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ, ಈಶ್ವರ-ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ಗೋಪಾಲಕೃಷ್ಣ ಯುವ ಸಂಘ ಜಂಟಿ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಕೆ , ಸನ್ಮಾನ ಪುರಸ್ಕಾರ ಹಾಗೂ ಸಾಂಪ್ರದಾಯಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿ, ‘ಕೋವಿ ಸಂಸ್ಕೃತಿಯು ಕೊಡಗಿನ ಪ್ರತಿಯೊಬ್ಬರ ಹೆಮ್ಮೆ ಹಾಗೂ ಪ್ರತಿಷ್ಠೆಯ ಸಂಕೇತವಾಗಿದೆ. ಕೊಡಗಿನ ಜನರ ನಿತ್ಯಜೀವನದಲ್ಲಿ ಕೋವಿ ಎಂಬುದು ಒಂದು ಅವಿಭಾಜ್ಯ ಅಂಗ. ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಸಮುದಾಯದ ಪ್ರತಿಯೊಬ್ಬರನ್ನು ಒಂದೆಡೆ ಸೇರಿಸಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗಿವೆ. ಕೃಷಿ ಚಟುವಟಿಕೆಗಳ ನಿರಂತರ ಒತ್ತಡದಲ್ಲೂ ಜನರಿಗೆ ಇಂತಹ ಸ್ಪರ್ಧೆಗಳು ಮನರಂಜನೆ ಹಾಗೂ ಹೊಸ ಉತ್ಸಾಹ ನೀಡುತ್ತವೆ ಎಂದು ಬಣ್ಣಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಅವಂದೂರು ಶ್ರೀ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷರಾದ ದೇವಾಯಿರ ಕೀರ್ತನ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಖಜಾಂಚಿ ಚಂದ್ರಪ್ರಕಾಶ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಪಟ್ಟಣ ದೀಪಕ್, ಸುರೇಶ್ ಸೇರಿದಂತೆ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.-