ಸೋಮವಾರಪೇಟೆ ; ಸೋಮವಾರಪೇಟೆ ಪಟ್ಟಣದಲ್ಲಿ ಆಯುಧ ಪೂಜೋತ್ಸವ ಸಮಾರಂಭ ಸೋಮವಾರ ನಡೆಯಿತು.ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿರುವ 50ನೇ ವರ್ಷದ ಆಯುಧ ಪೂಜೋತ್ಸವ ಅದ್ದೂರಿಯಾಗಿ ನಡೆಯಿತು.ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಆಯುಧ ಪೂಜೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು, ಮೋಟಾರ್ ಯೂನಿಯನ್ ವತಿಯಿಂದ ಜನೋತ್ಸವ ಮಾದರಿಯಲ್ಲಿ ನಡೆಸುವ ಆಯುಧ ಪೂಜೋತ್ಸವಕ್ಕೆ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.ಮೋಟಾರ್ ಯೂನಿಯನ್ ಸದಸ್ಯರ ಬಾಡಿಗೆ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿದ್ದರೂ, ಮಳೆ, ಬಿಸಿಲಿನಿಂದ ರಕ್ಷಣೆ ಇರಲಿಲ್ಲ. ಇದನ್ನು ಮನಗಂಡು ಸರ್ಕಾರದಿಂದ ಮೇಲ್ಛಾವಣಿ ನಿರ್ಮಿಸಲು ಅನುದಾನ ಒದಗಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ಡಾ. ಮಂತರ್ ಗೌಡ ಹೇಳಿದರು.
ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಸಂಘದ ಖಜಾಂಚಿ ಡ್ಯಾನಿ ಡೊಮಿನಿಕ್, ಅರೆಯೂರಿನ ಪ್ರಗತಿಪರ ಕೃಷಿಕ ಟಿ.ಕೆ. ಲೋಕಾನಂದ ಅವರುಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಇದರೊಂದಿಗೆ ಸೋಮವಾರಪೇಟೆ ಪಟ್ಟಣದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪಂಚಾಯಿತಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.ರಾತ್ರಿ ಕಲಾವಿದ ವಾಸುಕಿ ವೈಭವ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.21ಎಸ್‌ಪಿಟಿ03: ಸೋಮವಾರಪೇಟೆ ಪಟ್ಟಣದಲ್ಲಿ ಆಯುಧಾ ಪೂಜೆ ಪ್ರಯುಕ್ತ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.