
ವಿಜೃಂಭಣೆಯ ಮೆರವಣಿಗೆ ಮೂಲಕ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ವಿಸರ್ಜನೆ
ಪಟ್ಟಣದ ಮರವಂಜಿ ವೃತ್ತದ ಬಳಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯನ್ನು ಸೋಮವಾರ ಪಟ್ಟಣದಾದ್ಯಂತ ವಿಜೃಂಭಣೆಯ ಮೆರವಣಿಗೆ ಮೂಲಕ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು.
ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ವಿಘ್ನೇಶ್ವರನ ಆಸ್ಥಾನ ಮಂಟಪದಲ್ಲಿ ಪ್ರತಿದಿನ ವಿಶೇಷ ಪೂಜೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣಪತಿ ಹೋಮ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳನ್ನು ೧೫ ದಿನ ಗಳ ಕಾಲ ನಿರಂತರವಾಗಿ ನಡೆಸಲಾಗಿತ್ತು.ಸೋಮವಾರ ಮಧ್ಯಾಹ್ನ ೪ ಗಂಟೆ ಸುಮಾರಿಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಂಟಪದಿಂದ ಹೊರತಂದು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಬಿ.ಸಿ.ರೋಡ್ ಮಂಗಳೂರಿನ ಸತ್ಯಶ್ರೀ ಕಲಾ ಬಳಗ ಸಾಂಸ್ಕೃತಿಕವಾಗಿ ಚಟುವಟಿಕೆಗಳನ್ನು ರೋಡ್ ಶೊ ಮೂಲಕ ನಡೆಸಿಕೊಟ್ಟಿತು. ಚಂಡೆಮೇಳ, ಅಬ್ಬರದ ಡಿಜೆ ಸದ್ದಿಗೆ ಯುವಕ, ಯುವತಿಯರು ಲಯಬದ್ಧವಾಗಿ ನರ್ತಿಸುತ್ತಿದ್ದರು. ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕ ಡಿಜೆ ತರಿಸಿ, ಹೆಣ್ಣುಮಕ್ಕಳಿಗೆ ವಿಶೇಷ ಬಂದೋ ಬಸ್ತ್ ವ್ಯವಸ್ಥೆ ಮಾಡಿ ಅವರು ನರ್ತಿಸುತ್ತಾ ಸಾಗಲು ಅನುವು ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಪಟ್ಟಣದ ಮುಸ್ಲಿಂ ಬಾಂಧವರು ನೀರಿನ ಸ್ಯಾಷೆಗಳನ್ನು ವಿತರಿಸಿ ಸೌಹಾರ್ದ ಮೆರೆದರು.
ಗಣಪತಿ ವಿಸರ್ಜನೆಗೂ ಮೊದಲು ಪಟ್ಟಣದಲ್ಲಿ ಆರ್‌ಎಎಫ್ ಬೆಟಾಲಿಯನ್, ಪೊಲೀಸ್ ಮತ್ತು ಹೋಂಗಾರ್ಡ್ ಸಿಬ್ಬಂದಿ ರೂಟ್ ಮಾರ್ಚ್ ನಡೆಸಿದರು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮೆರವಣಿಗೆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ೯ಇನ್‌ಸ್ಪೆಕ್ಟರ್, ೧೬ ಸಬ್ ಇನ್‌ಸ್ಪೆಕ್ಟರ್, ಒಂದು ಆರ್‌ಎಎಫ್ ತುಕಡಿ, ೨ ಕೆಎಸ್‌ಆರ್‌ಪಿ ತುಕಡಿ, ೪ಡಿಎಆರ್ ತುಕಡಿಗಳು ಭದ್ರತಾ ಕಾರ್ಯ ನಿರ್ವಹಿಸಿದವು. ಅಗ್ನಿ ಶಾಮಕ ವಾಹನ ಸಹ ಜೊತೆಯಲ್ಲಿ ತೆರಳಿದವು.
೨೮ಕೆಡಿಆರ್೧
೨೮ಕೆಡಿಆರ್೨