
ಪಕ್ಷದ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ
ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ. ರವಿ ಅವರ ಹತ್ಯೆಗೆ ಶಂಕಿತ ಉಗ್ರರು ಸಂಚು ರೂಪಿಸಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದ್ದಾರೆ.ಸೋಮವಾರ ಹೇಳಿಕೆ ನೀಡಿರುವ ಅವರು ಡಾ.ಸಿ.ಟಿ. ರವಿ ಅವರು ರಾಜಕೀಯ ಪ್ರವೇಶಕ್ಕೂ ಮುನ್ನದಿಂದಲೇ ಹಿಂದುತ್ವ ವನ್ನು ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಆದರೆ ಅವರು ಯಾವುದೇ ಧರ್ಮ ಅಥವಾ ಜಾತಿ ವಿರೋಧಿಯಲ್ಲ. ಯಾವುದೇ ಧರ್ಮ, ಜಾತಿ ವ್ಯಕ್ತಿಗಳನ್ನು ಟೀಕಿಸುವ ಅಥವಾ ವಿರೋಧಿಸುವ ನಿಲುವು ಹೊಂದಿಲ್ಲ. ದೇಶದ ಹಿತಕ್ಕೆ ಧಕ್ಕೆ ತರುವ ಚಟು ವಟಿಕೆಗಳಲ್ಲಿ ತೊಡಗಿರುವ ಮತಾಂಧರು ಹಾಗೂ ದೇಶವಿರೋಧಿ ಚಟುವಟಿಕೆಗಳನ್ನು ಮಾತ್ರ ಅವರು ವಿರೋಧಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.ಹಿಂದುತ್ವದ ಪರವಾಗಿರುವ ಕಾರಣಕ್ಕೆ ರವಿ ಅವರನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬುದು ಗಂಭೀರ ವಿಚಾರ. ಶಂಕಿತ ಭಯೋತ್ಪಾದಕರ ಈ ಸಂಚನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಜೀವ ಬೆದರಿಕೆಗಳಿಗೆ ಡಾ.ಸಿ.ಟಿ. ರವಿ ಅವರು ಎಂದಿಗೂ ಹೆದರುವವರಲ್ಲ. ಯಾವುದೇ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಅವರಿಗಿದ್ದು, ಜೀವ ಬೆದರಿಕೆ ಮೂಲಕ ಅವರ ಹಿಂದುತ್ವದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.ರಾಜ್ಯದಲ್ಲಿ ದೇಶವಿರೋಧಿ ಚಟುವಟಿಕೆಗಳು ತೆರೆಮರೆಯಲ್ಲಿ ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯದ ಗೃಹ ಸಚಿವರು ವಿಫಲರಾಗಿದ್ದಾರೆ ಎಂದು ಪುಟ್ಟಸ್ವಾಮಿ ಟೀಕಿಸಿದ್ದಾರೆ.ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರದಲ್ಲಿ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿರುವುದು ತಿಳಿದು ಬಂದಿದೆ. ಆದರೆ ಈ ಗಂಭೀರ ಪ್ರಕರಣದ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಯಾವುದೇ ರಾಜಕಾರಣಿಯ ವಿರುದ್ಧ ಇಂತಹ ಹತ್ಯೆ ಸಂಚು ನಡೆದಾಗ ಸರ್ಕಾರ ಅಗತ್ಯ ಭದ್ರತೆ ಒದಗಿಸಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಡಾ.ಸಿ.ಟಿ. ರವಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.