ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಗ್ರಾಮದೇವಿಯ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಪುನರ್ ಪ್ರತಿಷ್ಠಾಪನೆಗೊಳ್ಳಲಿರುವ ಗ್ರಾಮದೇವಿ ದ್ಯಾಮವ್ವನ ಮೂರ್ತಿಗೆ ಬಣ್ಣ ಲೇಪನವಾಗಿದ್ದರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೃಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ಭವ್ಯವಾದ ದೇವಿಯ ಮೂರ್ತಿಯ ಮೆರವಣಿಗೆ ಜರಗಿತು.
ದೇವಿ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಲಕ್ಷಾಂತರ ಮೌಲ್ಯದ ಮದ್ದುಗಳನ್ನು ಸುಡಲಾಯಿತು. ಪಟಾಕಿಯಲ್ಲಿ ನಾಗರಹಾವು ಸೇರಿದಂತೆ ಆಕಾಶದಲ್ಲಿ ಸಿಡಿಮದ್ದುಗಳ ಚಮತ್ಕಾರ ಕಂಡು ಭಕ್ತರು ಆಶ್ಚರ್ಯ ಚಕಿತರಾಗಿದ್ದರು. ಸುಡುಮದ್ದು ಸಿಡಿಸುವ ಮೂಲಕ ದೇವಿಯ ಮೆರವಣಿಗೆಗೆ ಹೆಚ್ಚಿನ ಕಳೆ ಕಟ್ಟಿದ್ದು ಕಂಡು ಬಂದಿತು. ದೇವಿಯ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಭಕ್ತರು ಗ್ರಾಮದ ತುಂಬೆಲ್ಲ ತಳಿರು ತೋರಣ ಕಟ್ಟಿ, ವಿದ್ಯುತ್ ದೀಪಗಳ ಅಲಂಕಾರ ಮಾಡಿ, ಮನೆಯ ಮುಂದೆ ರಂಗೋಲಿ ಹಾಕಿ, ರಸ್ತೆಗೆ ನೀರು ಹಾಕಿ ಅತ್ಯಂತ ಭಕ್ತಿ ಭಾವದಿಂದ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ನರೇಗಲ್ಲ: ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ರಥೋತ್ಸವವು ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ, ವೈಭವದಿಂದ ಜರುಗಿತು.ಬೆಳಗ್ಗೆ ಜಾತ್ರೆಯ ಅಂಗವಾಗಿ ಕತೃ ಗದ್ದುಗೆಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ಸಂಕನಗೌಡ್ರ ಮನೆಯಿಂದ ತೇರಿನ ಕಳಸ ಹಾಗೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಿದ್ನೇಕೊಪ್ಪ ಗ್ರಾಮದಿಂದ ಭಕ್ತಿ ಪೂರ್ವಕವಾಗಿ ಮೆರವಣಿಗೆ ಮೂಲಕ ಭಕ್ತರು ರಥಕ್ಕೆ ಹಗ್ಗ ತಂದು ಶೃಂಗರಿಸಿದರು.
ಜಾತ್ರೆಗೆ ಗಜೇಂದ್ರಗಡ, ಗದಗ, ರೋಣ, ಗುಜಮಾಗಡಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ತೋಟಗಂಟಿ, ಡ.ಸ. ಹಡಗಲಿ, ಯರೆಬೇಲೇರಿ, ನಿಡಗುಂದಿಕೊಪ್ಪದ, ರೋಣ, ಕೊತಬಾಳ, ಅಣ್ಣಿಗೇರಿ, ಯಲಬುರ್ಗಾದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್, ಎತ್ತಿನ ಬಂಡಿ ಮತ್ತು ಪಾದಯಾತ್ರೆ ಮೂಲಕ ಭಕ್ತರು ಬಂದು ವೀರಪ್ಪಜ್ಜನ ದರ್ಶನಾಶೀರ್ವಾದ ಪಡೆದರು.