ಉಡುಪಿ : ಇಲ್ಲಿನ ಕನ್ನರ್ಪಾಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 21ನೇ ವರ್ಷದ ಗಣೇಶೋತ್ಸವವು ರಾಹೆ 66ರ ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 14ರಿಂದ 23ರವರೆಗೆ 10 ದಿನಗಳ ವೈಭವದಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ ಅವರು ತಿಳಿಸಿದ್ದಾರೆ.ಸೋಮವಾರ ಬೆಳಿಗ್ಗೆ 8.30ಕ್ಕೆ ಭವ್ಯ ಮೆರವಣಿಗೆಯಲ್ಲಿ ವಿಗ್ರಹವನ್ನು ತಂದು ಪ್ರತಿಷ್ಠಾಪನೆ ನಡೆಸಲಾಗುವುದು, ನಂತರ 6 ಕಾಯಿ ಗಣಹೋಮ, ಮಹಾಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಸೆ. 15 ಬಾಲಗಣಪತಿ ಹೋಮ, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮವನ್ನು ಖ್ಯಾತ ಸಿವಿಲ್ ಇಂಜಿನಿಯರ್ ಎಂ. ಗಂಗಾಧರ ರಾವ್ ಕನ್ನರ್ಪಾಡಿ ಉದ್ಘಾಟಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
23 ರಂದು ಬೆಳಿಗ್ಗೆ ಋಣ ಮೋಚನ ಯಾಗ, ಸಂಜೆ 5.30ಕ್ಕೆ ನಗರದಲ್ಲಿ ವಿಜೃಂಭಣೆಯ ವಿಸರ್ಜನಾ ಮೆರವಣಿಗೆ ನಡೆದು, ದೇವಾಲಯದ ಕಣ್ವ ಪುಷ್ಕರಣಿಯಲ್ಲಿ ವಿಗ್ರಹದ ಜಲಸ್ತಂಭನ ನಡೆಯಲಿದೆ.
ನಿತ್ಯವೂ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣಪತಿ ದೇವರಿಗೆ ವಿವಿಧ ಹರಕೆ ಸೇವೆಗಳು ನಡೆಯುತ್ತವೆ ಎಂದು ಕೃಷ್ಣಮೂರ್ತಿ ಆಚಾರ್ಯರು ತಿಳಿಸಿದ್ದಾರೆ.