ಉಪ್ಪಿನಂಗಡಿಯ ಗ್ರಾ.ಪಂ. ಸಭಾಂಗಣದಲ್ಲಿ ಜರುಗಿದ ಪ್ರಜಾ ಸೇವೆ ಆಂದೋಲನ ಸಭೆ

ಉಪ್ಪಿನಂಗಡಿ: ಸರ್ಕಾರಿ ಸೇವೆ ಜನರಿಗೆ ಒದಗಿಸಲು ಮುಖ್ಯಮಂತ್ರಿಗಳು ಪ್ರಜಾಸೇವೆ ಎಂಬ ಇಲಾಖೆ ಹುಟ್ಟು ಹಾಕಿದ್ದಾರೆ. ಅದರಂತೆ ರಾಜ್ಯದ ಯಾವುದೇ ಇಲಾಖೆಗೆ ಸಲ್ಲಿಸಲ್ಪಟ್ಟ ಅರ್ಜಿಗಳು ಸಕಾಲದಲ್ಲಿ ಇತ್ಯರ್ಥವಾಗದೇ ಹೋದರೆ ರಾಜ್ಯದ ಜನತೆಗೆ ಪ್ರಜಾ ಸೇವೆಯಡಿ ನ್ಯಾಯ ದೊರಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಶನಿವಾರ ಉಪ್ಪಿನಂಗಡಿಯ ಗ್ರಾ.ಪಂ. ಸಭಾಂಗಣದಲ್ಲಿ ಜರುಗಿದ ಪ್ರಜಾ ಸೇವೆ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಮಂತ್ರಿಗಳು ದ.ಕ ಜಿಲ್ಲೆಯ ಅಭಿವೃದ್ಧಿಗೆ ಪೂರ್ಣ ಬೆಂಬಲ ನೀಡುತ್ತಿದ್ದು, ಜಿಲ್ಲೆಯನ್ನು ಪ್ರವಾಸಿತಾಣವನ್ನಾಗಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ಮಳೆಗಾಲದಲ್ಲಿ ಹಾನಿಗೊಳಗಾದ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲು 150 ಕೋಟಿ ರು. ಅನುದಾನ ಲಭಿಸಲಿದೆ. ಹಾಗೂ ಈಗಾಗಲೇ ಸಲ್ಲಿಸಲ್ಪಟ್ಟ ಜನರ ಬೇಡಿಕೆಗಳನ್ನು ಈಡೇರಿಸಲು 180 ಕೋಟಿ ರುಪಾಯಿ ಅನುದಾನ ದೊರಕಲಿದೆ ಎಂದು ತಿಳಿಸಿದರು. ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಉಮಾನಾಥ ಶೆಟ್ಟಿ, ತಹಸೀಲ್ದಾರ್ ಎಸ್ ಪಿ ಕೂಡ್ಲಗಿರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತು ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಕೆ ಟಿ ಗೋಪಾಲ್ ವಂದಿಸಿದರು. ಗ್ರಾಮಕರಣಿಕ ನರಿಯಪ್ಪ ನಿರೂಪಿಸಿದರು.