ಶಿವಮೊಗ್ಗ: ಅ.7ರಂದು ನಗರದಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಈ ವರ್ಷ ಕಲಾ ತಂಡದ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಯಂತಿ ಎಲ್ಲಿ ಆಚರಣೆ ಮಾಡಬೇಕೆಂಬ ಗೊಂದಲ ಬೇಡ, ಸಮಾಜದ ಮುಖಂಡರೆಲ್ಲಾ ಸೇರಿ ಇಲಾಖೆಯ ಅಧಿಕಾರಿಯೊಂದಿಗೆ ಚರ್ಚಿಸಿ ನಿರ್ಧಾರ ಮಾಡಿ, ಅದರಂತೆ ಜಿಲ್ಲಾಡಳಿತ ಜಯಂತಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಿದ್ದು, ಸಂಚಾರಕ್ಕೆ ಮತ್ತು ಮೆರವಣಿಗೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಹೊರಡುವ ಭಾವಚಿತ್ರಕ್ಕೆ ಹೂವಿನ ಹಾಗೂ ತೋರಣದ ಅಲಂಕಾರ ಮಹಾನಗರ ಪಾಲಿಕೆ ಮಾಡಲಿದ್ದು, ಜಯಂತಿ ಮುಗಿದ ಬಳಿಕ ಊಟ ಹಾಗೂ ಉತ್ತಮವಾದ ಕುಡಿಯುವ ನೀರಿನ ವ್ಯವಸ್ಥೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.ಜಯಂತಿ ದಿನದಂದು ವಿದ್ಯಾನಗರದ ಬಳಿ ಇರುವ ವಾಲ್ಮೀಕಿ ವೃತ್ತಕ್ಕೆ ಹೊಸ ನಾಮಫಲಕ ಅಳವಡಿಸಲಿದ್ದು, ಸಮಾಜದ ಮುಖಂಡರಿಂದ ಪುಷ್ಪಾರ್ಚನೆ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೆರವಣಿಗೆಗೆ ಕಲಾ ತಂಡಗಳನ್ನು ನಿಯೋಜನೆ ಮಾಡಲು ತಿಳಿಸಲಾಗಿದ್ದು, ವಾಲ್ಮೀಕಿ ಸಮಾಜದಲ್ಲಿ ಕಲಾ ತಂಡಗಳಿದ್ದರೆ ಅದಕ್ಕೂ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಸಮಾಜದ ಮುಖಂಡರು ಮಾತನಾಡಿ, ಈ ಬಾರಿ ಜಯಂತಿಗೆ ಗ್ರಾಮಾಂತರ ಭಾಗದಿಂದ ಹೆಚ್ಚಿನ ಜನರು ಬರಲಿದ್ದು, ಎಲ್ಲಾ ಸಂಘಟನೆಗಳು ಸಹ ಭಾಗಿತ್ವದಲ್ಲಿ ವಹಿಸಲಿದ್ದಾರೆ. ಹಾಗಾಗಿ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಮನವಿ ಮಾಡಿದರು.