ಲೋಕ್ ಅದಾಲತ್‌ನಲ್ಲಿ 1,04,649 ಪ್ರಕರಣಗಳು ಇತ್ಯರ್ಥ

KannadaprabhaNewsNetwork |  
Published : Sep 19, 2025, 01:00 AM IST
18ಸಿಎಚ್‌ಎನ್56ಚಾಮರಾಜನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ (ಎ.ಡಿ.ಆರ್) ಕೇಂದ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಕಳೆದ ಬಾರಿಯ ಲೋಕ್‌ ಅದಾಲತ್‌ಗಿಂತ ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕಳೆದ ಬಾರಿಯ ಲೋಕ್‌ ಅದಾಲತ್‌ಗಿಂತ ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಹೇಳಿದರು.ನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ (ಎ.ಡಿ.ಆರ್) ಕೇಂದ್ರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕ್ ಅದಾಲತ್‌ನಲ್ಲಿ 1,01,431 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ಸೆ.13ರಂದು ನಡೆದ ಲೋಕ್‌ ಅದಾಲತ್‌ನಲ್ಲಿ ಅದಾಲತ್‌ನಲ್ಲಿ 2672 ನ್ಯಾಯಾಲಯ ಪ್ರಕರಣಗಳು ಹಾಗೂ 1,01,977 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 1,04,649 ಪ್ರಕರಣಗಳು ಇತ್ಯರ್ಥವಾಗಿವೆ. ಹೆಚ್ಚುವರಿಯಾಗಿ 3218 ಪ್ರಕರಣಗಳನ್ನು ಪರಿಹರಿಸಲಾಗಿದೆ ಎಂದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ‘ಸರ್ವರಿಗೂ ನ್ಯಾಯ’ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಎಲ್ಲಾ ರೀತಿಯ ಸಿವಿಲ್, ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು, ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಮೆಗಾ-ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.

ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಚಾಮರಾಜನಗರದ 440, ಯಳಂದೂರು 308, ಕೊಳ್ಳೇಗಾಲ 1405 ಹಾಗೂ ಗುಂಡ್ಲುಪೇಟೆಯ 519 ಸೇರಿದಂತೆ ಬಾಕಿ ಇದ್ದ 2672 ನ್ಯಾಯಾಲಯದ ಪ್ರಕರಣಗಳು ಮತ್ತು ಚಾಮರಾಜನಗರದ 56268, ಯಳಂದೂರಿನ 2849, ಕೊಳ್ಳೆಗಾಲ 17931 ಹಾಗೂ ಗುಂಡ್ಲುಪೇಟೆಯ 24929 ಸೇರಿದಂತೆ ಒಟ್ಟು 1,01,977 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದ ಒಟ್ಟು 1,04,649 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಚೆಕ್ಕು ಅಮಾನ್ಯ ಪ್ರಕರಣಗಳು, ಎಂ.ಇ.ಸಿ ಹಾಗೂ ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ಒಟ್ಟು 12,72,69,860 ರು. ಗಳನ್ನು ಸಂಗ್ರಹಿಸಲಾಗಿದೆ ಎಂದರು.

ರಾಜಿ ಯೋಗ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ಜನಸಾಮಾನ್ಯರು ಲೋಕ್ ಅದಾಲತ್‌ಗಾಗಿ ಕಾಯುವ ಅವಶ್ಯವಿಲ್ಲ. ಇದಕ್ಕಾಗಿ ನ್ಯಾಯಾಲಯದಲ್ಲಿ ಇದೇ ಮೊದಲಬಾರಿಗೆ ‘ಮಧ್ಯಸ್ಥಿಕೆ ಶಿಬಿರ’ ಏರ್ಪಡಿಸಲಾಗಿದೆ. ಮಧ್ಯಸ್ಥಿಕೆ ಶಿಬಿರವು ಉಭಯ ಪಕ್ಷಾಕಾರರಿಗೂ ನ್ಯಾಯ ದೊರೆಯಲು ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಕೌಟುಂಬಿಕವಾಗಿ ವಿವಾಹ ವಿಚ್ಛೇಧನ, ಪತಿ ಅಥವಾ ಪತ್ನಿಯಿಂದ ಜೀವನಾಂಶ ಕೋರಿಕೆ ಹಾಗೂ ವಿಚ್ಚೇಧನಾ ಪ್ರಕರಣ ದಾಖಲಾಗುವ ಮೊದಲಿನ ದೂರುಗಳು ಸೇರಿದಂತೆ ಒಟ್ಟು 8 ಪ್ರಕರಣಗಳನ್ನು ಇತ್ಯರ್ಥಪಡಿಸಿ ಪತಿ-ಪತ್ನಿಯರನ್ನು ಒಂದುಗೂಡಿಸಿರುವುದು ಈ ಅದಾಲತ್ ವಿಶೇಷವಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿದ್ದ ಬಾಕಿ ರಾಜಿಯೋಗ್ಯ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳ ಕಕ್ಷಿದಾರರು ನ್ಯಾಯಾಧೀಶರು, ವಕೀಲರು, ಸಂಧಾನಕಾರರಿಂದ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ 10-15 ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ಅಲ್ಲದೆ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗುವ ಮೊದಲೆ ಸಾಕಷ್ಟು ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥವಾಗಿರುವುದು ಹರ್ಷದಾಯವಾಗಿದೆ. ಇದರಿಂದ ಕಕ್ಷಿದಾರರ ಸಮಯ, ಹಣ, ಉಳಿತಾಯವಾಗಿದೆ. ನ್ಯಾಯಾಲಯದ ಹೊರೆಯೂ ತಗ್ಗಿದೆ. ಅದಾಲತ್ ಯಶಸ್ಸಿಗೆ ಕಾರಣರಾದ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬ್ಯಾಂಕ್‌ಗಳಿಗೆ ಅಭಿನಂದನೆಗಳನ್ನು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ. ಪ್ರಕಾಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ