ಶುದ್ಧ ಕುಡಿಯುವ ನೀರಿನ ಘಟಕಕ್ಕೆ ₹10 ಲಕ್ಷ ಅನುದಾನ

KannadaprabhaNewsNetwork | Published : Apr 4, 2025 12:45 AM

ಸಾರಾಂಶ

ಕ್ಷೇತ್ರದ ಮೂಲೆ ಮೂಲೆಗಳ ಕುಗ್ರಾಮಗಳಿಗೆ ಭೇಟಿ ನೀಡುವುದರಿಂದ ಅಲ್ಲಿನ ಜನರಯ ಸಮಸ್ಯೆ ಅರಿತು ಪರಿಹಾರ ನೀಡಲು ಸಾಧ್ಯವಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯ 366 ಹಳ್ಳಿಗಳ ಪೈಕಿ ಇದುವರೆಗೂ 140 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಯ ಸಮಸ್ಯೆಗಳ ಬಗ್ಗೆ ತಿಳಿದಿದ್ದೇನೆ. ಸಾಧ್ಯವಾದ ಮಟ್ಟಿಗೆ ಪರಿಹಾರ ನೀಡಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ಷೇತ್ರದ ಮೂಲೆ ಮೂಲೆಗಳ ಕುಗ್ರಾಮಗಳಿಗೆ ಭೇಟಿ ನೀಡುವುದರಿಂದ ಅಲ್ಲಿನ ಜನರಯ ಸಮಸ್ಯೆ ಅರಿತು ಪರಿಹಾರ ನೀಡಲು ಸಾಧ್ಯವಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯ 366 ಹಳ್ಳಿಗಳ ಪೈಕಿ ಇದುವರೆಗೂ 140 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಯ ಸಮಸ್ಯೆಗಳ ಬಗ್ಗೆ ತಿಳಿದಿದ್ದೇನೆ. ಸಾಧ್ಯವಾದ ಮಟ್ಟಿಗೆ ಪರಿಹಾರ ನೀಡಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ತಾಲೂಕಿನ ಕೇತೇನಹಳ್ಳಿ,ಕೊತ್ತೂರು, ಆನೆಮಡಗು ಮತ್ತು ಸಾದೇನಹಳ್ಳಿ ಗ್ರಾಮಗಳಿಗೆ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ಗುರುವಾರ 36 ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮದ ಜನರಯ ಅಹವಾಲು ಸ್ವೀಕರಿಸಿ ಮಾತನಾಡಿದರು.

ಕೇತೇನಹಳ್ಳಿ, ಕೊತ್ತೂರು, ಆನೆಮಡಗು ಮತ್ತು ಸಾದೇನಹಳ್ಳಿ ಗ್ರಾಮಗಳು ಕುಗ್ರಾಮಗಳಾಗಿದ್ದು ಈ ಗ್ರಾಮಗಳಲ್ಲಿ ಯಾರಿಗಾದರೂ ಅನಾರೋಗ್ಯ ಅಥವಾ ಗರ್ಭಿಣಿಯರಿಗೆ ಹೆರಿಗೆ ನೋವು ಉಂಟಾದರೆ ಆಸ್ಪತ್ರೆಗೆ ತೆರಳಲು ಆ್ಯಂಬ್ಯುಲೆನ್ಸ್ ಗೆ ಕರೆ ಮಾಡಬೇಕೆಂದರೆ ಮೊಬೈಲ್ ನೆಟ್ ವರ್ಕ್ ದೊರೆಯುವುದಿಲ್ಲ. ಇಂತಹ ಕುಗ್ರಾಮಗಳಾಗಿವೆ ಎಂದರು.

ಈ ಎಲ್ಲಾ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳಿಲ್ಲ. ಎಲ್ಲಾ ಗ್ರಾಮಗಳಿಗೂ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಶಾಸಕರ ಅನುದಾನದಲ್ಲಿ ತಲಾ ₹10 ಲಕ್ಷ ನೀಡುತ್ತಿದ್ದೇನೆ. ವಸತಿ ಮತ್ತು ಮನೆ ರಹಿತರಿಗೆ ವಸತಿ ಮತ್ತು ಮನೆ ನಿರ್ಮಿಸಲು ಗ್ರಾಮಗಳಲ್ಲಿ ರಸ್ತೆ, ಚರಂಡಿ, ಹೊಲ- ತೋಟ, ಗದ್ದೆಗಳಿಗೆ ತೆರಳಲು ರಸ್ತೆ, ಸ್ಮಶಾನಗಳಿಗೆ ರಸ್ತೆ, ಬೀದಿ ದೀಪ, ಸಮುದಾಯ ಭವನಗಳಿಗೆ ಜಾಗ ಮತ್ತು ಹಣ ಮಂಜೂರು ಮಾಡಿಸಿದ್ದೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲ ಸಚಿವರು ನನಗೆ ಹೆಚ್ಚು ಅನುದಾನ ನೀಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗೂ ಸರಾಸರಿ ₹10 ಕೋಟಿ ಅನುದಾನ ಹಾಕುತ್ತಿದ್ದೇನೆ. ಆದರೆ ಆ ಅನುದಾನ ನನ್ನ ಕ್ಷೇತ್ರದ ಜನರ ಬೇಡಿಕೆ ಈಡೇರಿಸಲು ಸಾಲದು. ಆದರೆ ನನ್ನ ಬಳಿ ಏನಾದರೂ ಒಂದೆರಡು ಸಾವಿರ ಕೋಟಿ ರು. ಇದ್ದಿದ್ದರೆ ಪ್ರತಿ ಗ್ರಾಮದ ಅಭಿವೃದ್ದಿಗೆ ₹10 ಕೋಟಿ ನೀಡುತ್ತಿದ್ದೆ ಎಂದರು.

ಈಗಾಗಲೇ 10 ಅಮ್ಮ ಆ್ಯಂಬ್ಯುಲೆನ್ಸ್, ಕ್ಷೇತ್ರದಲ್ಲಿ ಕಳೆರಡು ವರ್ಷಗಳಿಂದ ಪ್ರತಿ ಮಹಿಳೆಯರಿಗೂ ಸೀರೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಂಗನವಾಡಿ,ಶಾಲಾ ಮಕ್ಕಳಿಗೆ ಬಟ್ಟೆ ಇವುಗಳಿಗೆ ನನ್ನ ಸ್ವಂತಹಣ ಖರ್ಚಾಗುತ್ತಿದೆ. ನನ್ನ ಕಾರಿಗೂ ನಾನು ಪ್ರತಿ ತಿಂಗಳು ಇಎಂಐ ಕಟ್ಟಬೇಕು. ಆ ಭಗವಂತ ಶಕ್ತಿ ನೀಡಿದರೆ ಖಂಡಿತ ಎಲ್ಲರ ಬೇಡಿಕೆ ಈಡೇರಿಸುವೆ ಎಂದರು.

ಕುಗ್ರಾಮಗಳಿಗೆ ರಸ್ತೆ ಸೌಲಭ್ಯ: ಆವಲಬೆಟ್ಟದ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಬಡ ಕುಟುಂಬಗಳು ರಸ್ತೆ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿರುವುದರ ಬಗ್ಗೆ ಸ್ಥಳಿಯರು ಮನವಿ ಮಾಡಿದ್ದು, ಪ್ರತಿನಿತ್ಯ ಅಗತ್ಯ ಸೇವೆಗಳಿಗಾಗಿ ಸುಮಾರು 10 ಕಿ.ಮೀ.ಗಟ್ಟಲೇ ನಡೆಯಬೇಕು. ಮಹಿಳೆಯರು, ಮಕ್ಕಳು ಅಸುರಕ್ಷತೆಯ ಭಯದಲ್ಲಿದ್ದಾರೆ. ಇದಕ್ಕೆ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದರು. ಈ 10 ಕಿ.ಮೀ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡಿದರು.

ತಹಸೀಲ್ದಾರ್ ಅನಿಲ್, ತಾಪಂ ಇಒ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ,ಎಡಿಎಲ್ಆರ್ ವಿವೇಕ್ ಮಹದೇವ್, ಪಿಡಿಓ ಸತ್ಯಪ್ರಸಾದ್, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಾಯರ್ ಮುನೇಗೌಡ, ಗವಿರಾಯಪ್ಪ, ಅರವಿಂದ್, ರಮೇಶ್ ಬಾಬು, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share this article