ಉತ್ತಮ ಪ್ರಾತ್ಯಕ್ಷಿಕೆಯೊಂದಿಗೆ ನಿಖರ ಮಾಹಿತಿ ಸಲ್ಲಿಸಿ

KannadaprabhaNewsNetwork | Published : Apr 4, 2025 12:45 AM

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಪೂರ್ವ ಸಿದ್ಧತಾ ಸಭೆ ನಡೆಸಿದರು.

ಪೂರ್ವ ಸಿದ್ಧತಾಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

5ನೇ ರಾಜ್ಯ ಹಣಕಾಸು ಆಯೋಗ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದೆ. ಏ.7 ರಂದು ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕುರಿತಂತೆ ಸಭೆ ನಡೆಸಲಿದ್ದು ಜಿಲ್ಲೆಯ ಅಧಿಕಾರಿಗಳು ಉತ್ತಮ ಪ್ರಾತ್ಯಕ್ಷಿಕೆಯೊಂದಿಗೆ ಆಯೋಗಕ್ಕೆ ನಿಖರ ಮಾಹಿತಿ ಹಾಗೂ ಸಲಹೆ ಸೂಚನೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೂರ್ವ ಸಿದ್ಧತಾಸಭೆ ನಡೆಸಿ ಅವರು ಮಾತನಾಡಿದರು.

5ನೇ ರಾಜ್ಯ ಹಣಕಾಸು ಆಯೋಗ ಜಿಪಂ, ತಾಪಂ, ಗ್ರಾಮ ಪಂಚಾಯಿತಿ, ನಗರ ಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ವಿಮರ್ಶಿಸಲಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆ, ಆರ್ಥಿಕ ಸ್ಥಿತಿ, ಸಂಪನ್ಮೂಲಗಳ ಕ್ರೂಢಿಕರಣ, ಹಂಚಿಕೆ, ಮೂಲ ಸೌಕರ್ಯ ಹಾಗೂ ಸೇವೆಗಳು, ತಾಂತ್ರಿಕ ಕೌಶಲ್ಯ ಹಾಗೂ ಸುಧಾರಣೆಗಳ ಕುರಿತು ವಿವರಗಳನ್ನು ಆಯೋಗಕ್ಕೆ ಸಲ್ಲಿಸಬೇಕು. ಜಿಲ್ಲೆಯ ಜನಸಂಖ್ಯೆಯ ವಿವರ, ಸದ್ಯ ಮಂಜೂರಾದ ಹುದ್ದೆಗಳು, ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಗಳಿಗೆ ಅಗತ್ಯವಿರುವ ಸಿಬ್ಬಂದಿ ಬೇಡಿಕೆಯನ್ನು ಆಯೋಗಕ್ಕೆ ಸಲ್ಲಿಸಬೇಕು. ಸದ್ಯ ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗಗಳು, ನಗರೋತ್ಥಾನ, ಮನರೇಗಾ, ಸೇವಾ ಶುಲ್ಕ, ಕರ ಹಾಗೂ ಸುಂಕ ಆಸ್ತಿಗಳಿಂದ ಲಭ್ಯವಾಗುತ್ತಿರುವ ಬಾಡಿಗೆ ಸೇರಿದಂತೆ ಇತರೆ ಯೋಜನೆಗಳ ಅಡಿ ಲಭ್ಯವಾಗುತ್ತಿರುವ ಅನುದಾನ ಹಾಗೂ ಅದರ ಖರ್ಚು ವೆಚ್ಚಗಳ ಲೆಕ್ಕಗಳನ್ನು ಆಯೋಗ ನೀಡಬೇಕು. ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಸಭೆಗಳ ಸೇರಿಸಿ ಎರಡು ಪ್ರತ್ಯೇಕ ಪ್ರಾತ್ಯಕ್ಷಿಕೆಗಳನ್ನು ಸಿದ್ದಪಡಿಸಬೇಕು. ಅನುದಾನಗಳ ಬಳಕೆ ಹಾಗೂ ಆಡಳಿತ ಸುಧಾರಣೆ ಕುರಿತು ಸರ್ಕಾರದ ಮಟ್ಟದಲ್ಲಿ ತರಬೇಕಾದ ಧನಾತ್ಮಕ ಬದಲಾವಣೆಗಳ ಬಗ್ಗೆ ಸಲಹೆಗಳನ್ನು ಆಯೋಗಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ರಾಜ್ಯ ಹಣಕಾಸು ಆಯೋಗ ಏ.8 ರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದ್ದು ನಗರಸಭೆಗಳಿಗೆ ಭೇಟಿ ನೀಡಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಭೆಯಲ್ಲಿ ನೀಡಬೇಕಾದ ಅಗತ್ಯ ಮಾಹಿತಿಗಳನ್ನು ಸಿದ್ದವಿರಿಸಿಕೊಳ್ಳುವಂತೆ ಸೂಚಿಸಿದರು.

ಈ ವೇಳೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಪಂ. ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಪಂ ಇಒಗಳು ಉಪಸ್ಥಿತರಿದ್ದರು.

Share this article