ಗಂಗಾವಳಿ ನದಿಯ ಮಣ್ಣು ತೆರವಿಗೆ ಅನುದಾನ: ಸಚಿವ ಬೋಸರಾಜು

KannadaprabhaNewsNetwork | Published : Jan 11, 2025 12:46 AM

ಸಾರಾಂಶ

ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿನ ಅನುದಾನ ಬಿಡುಗಡೆ ಕುರಿತಂತೆ ಜ. 16ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವರೊಂದಿಗೆ ಚರ್ಚಿಸಲಾಗುವುದು.

ಕಾರವಾರ: ಶಿರೂರು ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಶೇಖರವಾಗಿರುವ ಮಣ್ಣು ತೆರವು ಮಾಡಲು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ಗುಡ್ಡ ಕುಸಿತದಿಂದ ನದಿಯಲ್ಲಿ ಶೇಖರವಾಗಿರುವ ಮಣ್ಣನ್ನು ತೆರವುಗೊಳಿಸದ್ದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಲಿದ್ದು, ಮಣ್ಣು ತೆರವುಗೊಳಿಸಲು ಅಗತ್ಯವಿರುವ ಅನುದಾನದ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ತಕ್ಷಣ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ನದಿಯ ಹರಿವಿನಿಂದ ಮುಂದಿನ ಮಳೆಗಾಲದಲ್ಲಿ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿನ ಅನುದಾನ ಬಿಡುಗಡೆ ಕುರಿತಂತೆ ಜ. 16ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವರೊಂದಿಗೆ ಚರ್ಚಿಸಲಾಗುವುದು. ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ಬಿಡುಗಡೆ ಮಾಡಲಾಗುತ್ತದೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ನಡೆಯುತ್ತಿರುವ ಖಾರ್ಲ್ಯಾಂಡ್ ಕಾಮಗಾರಿಗಳ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಾಸಕ ಸತೀಶ ಸೈಲ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.ದಲಿತರ ಸಮಸ್ಯೆ ಚರ್ಚಿಸಲು ಡಿನ್ನರ್ ಮೀಟಿಂಗ್: ಸಚಿವ ಬೋಸರಾಜು

ಕಾರವಾರ: ರಾಜಕೀಯ ಮಾಡಲು ಡಿನ್ನರ್ ಮೀಟಿಂಗ್ ಮಾಡಬೇಕಿಲ್ಲ. ದಲಿತರ ಸಮಸ್ಯೆ ಚರ್ಚಿಸಲು ಮೀಟಿಂಗ್ ಕರೆಯಲಾಗಿತ್ತು ಎಂದು ಗೃಹ ಸಚಿವ ಡಾ. ಪರಮೇಶ್ವರ ಕರೆದ ಮೀಟಿಂಗ್‌ಅನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಸಮರ್ಥಿಸಿಕೊಂಡಿದ್ದಾರೆ.ಶುಕ್ರವಾರ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ರಾಜಕೀಯ ಚರ್ಚೆ ಮಾಡಲು ಬೇರೆ ಬೇರೆ ಸ್ಥಳಗಳಿವೆ. ಡಿನ್ನರ್ ಮೀಟಿಂಗ್ ಆಗಬೇಕೆಂದಿಲ್ಲ. ರಾಜಕಾರಣಿಗಳು ಅಂದಾಗ ನಮ್ಮ ಮನೆಯಲ್ಲಿ ಟೇಬಲ್ ಮೇಲೆ ಪ್ಲೇಟ್ ಇರುತ್ತೆ. ದಲಿತರ ಪ್ರಕರಣಗಳ ಬಗ್ಗೆ ಮಾತನಾಡಿ, ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಅವರು ಮೀಟಿಂಗ್ ಕರೆದಿದ್ದರು. ಅದು ಮಾಧ್ಯಮಗಳ ಮೂಲಕ ತಪ್ಪು ಸಂದೇಶ ಹೋದ ಕಾರಣ ಹೈಕಮಾಂಡ್ ಈಗ ಮೀಟಿಂಗ್ ಬೇಡ ಎಂಬ ಸೂಚನೆ ನೀಡಿದ್ದರಿಂದ ಮುಂದಕ್ಕೆ ಹೋಗಿದೆ ಎಂದರು.

ಇಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಇದೆ. ವಿರೋಧ ಪಕ್ಷದಲ್ಲಿ ಶಿಸ್ತಿನ ವಿಷಯವೇ ಇಲ್ಲ. ಬಿಜೆಪಿಯಲ್ಲಿ ಹಿಂದೆ ಮೂರು ಬಾಗಿಲಾಗಿದ್ದು, ಈಗ ಆರು ಬಾಗಿಲಾಗಿದೆ. ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ತಮ್ಮ ತಲೆಯ ಮೇಲೆ ಕೂರುತ್ತಾರೆ ಎಂಬ ಹೆದರಿಕೆ ಬಿಜೆಪಿಯವರಿಗೆ ಆಗಿದೆ. ಹೀಗಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಯನ್ನು ಬಿಜೆಪಿಯವರು ಸೋಲಿಸಿದರು ಎಂದರು.

Share this article