ಭದ್ರಾ ಮೇಲ್ದಂಡೆಗೆ ಒಂದುವರೆ ತಿಂಗಳಲ್ಲಿ ಅನುದಾನ

KannadaprabhaNewsNetwork |  
Published : Oct 03, 2024, 01:32 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿರುವ ₹5300 ಕೋಟಿ ಅನುದಾನದಲ್ಲಿ ಇನ್ನೊಂದುವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿರುವ ₹5300 ಕೋಟಿ ಅನುದಾನದಲ್ಲಿ ಇನ್ನೊಂದುವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಜತೆ ಚರ್ಚಿಸಲಾಗಿದೆ. ಮೂರು ಸಮಾನ ಕಂತುಗಳಲ್ಲಿ ಹಣ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರಕ್ಕೆ ಕೆಲ ತಾಂತ್ರಿಕ ಮಾಹಿತಿ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ. ಅವರಿಂದ ಮಾಹಿತಿ ಪೂರೈಕೆಯಾದ ತಕ್ಷಣವೇ ಕೇಂದ್ರದ ಅನುದಾನ ಲಭ್ಯವಾಗಲಿದೆ. ಒಂದುವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗುವುದರಲ್ಲಿ ಸಂದೇಹ ಬೇಡ ಎಂದು ತಿಳಿಸಿದರು.ಚಿತ್ರದುರ್ಗ ಜಿಲ್ಲೆಯ ಬರ ಪರಿಸ್ಥಿತಿ ನಮಗೆ ಗೊತ್ತಿದೆ. ವಾಣಿ ವಿಲಾಸ ಸಾಗರ ಹೊರತು ಪಡಿಸಿ ಇತರೆ ಜಲಾಶಯ ಮೂಲಗಳಿಲ್ಲ. ಅದೂ ಕೂಡಾ ತುಂಬುವುದು ಕಷ್ಟವಾಗಿತ್ತು. ಭದ್ರಾ ಮೇಲ್ದಂಡೆಯಡಿ ಭರ್ತಿ ಮಾಡಲಾಗುತ್ತಿದೆ. ನಾನೂ ಕೂಡಾ ರೈತನ ಮಗನಾಗಿದ್ದು, ಕೇಂದ್ರದ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಂಸದ ಗೋವಿಂದ ಕಾರಜೋಳ ಅವರಿಗೆ ನೀರಾವರಿ ವಿಚಾರದಲ್ಲಿ ತಜ್ಞರಷ್ಟೇ ಅನುಭವವಿದೆ. ಅವರ ಮುಂದಾಳತ್ವದಲ್ಲಿ ಅನುದಾನ ಹರಿದು ಬರಲಿದೆ ಎಂದರು.ಇದಕ್ಕೂ ಮೊದಲು ಮನವಿ ಸಲ್ಲಿಸಿ ಮಾತನಾಡಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಸಹಕಾರ ಧೋರಣೆಯಿಂದಾಗಿ ಕುಂಟುತ್ತಾ ಸಾಗಿದೆ. ಇದು ಈ ಭಾಗದ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಅನುದಾನ ಕಾಯ್ದುಕೊಂಡು ರಾಜ್ಯ ಕೈ ಚೆಲ್ಲಿ ಕುಳಿತಿದೆ. ಕೇಂದ್ರ ಸರ್ಕಾರ ಕೂಡಾ ಘೋಷಿತ ₹5300 ಕೋಟಿ ಅನುದಾನ ಬಿಡುಗಡೆ ಮಾಡುವಲ್ಲಿ ಉದಾಸೀನ ತೋರಿದೆ ಎಂದು ದೂರಿದರು.

ಕೇಂದ್ರ ಸರ್ಕಾರದಲ್ಲಿ ಸೋಮಣ್ಣ ಜಲಶಕ್ತಿ ರಾಜ್ಯ ಸಚಿವರಾಗಿ ನಿಯೋಜನೆ ಗೊಳ್ಳುತ್ತಿದ್ದಂತೆ ಈ ಭಾಗದ ರೈತರಲ್ಲಿ ಆಶಾದಾಯಕ ಭಾವನೆ ಮೂಡಿತ್ತು. ಭದ್ರಾ ಮೇಲ್ದಂಡೆಗೆ ಕೇಂದ್ರ ತಕ್ಷಣವೇ ಅನುದಾನ ಬಿಡುಗಡೆ ಮಾಡುತ್ತದೆ, ಆಪದ್ಭಾಂಧವರಾಗಿ ಸೋಮಣ್ಣ ಬಂದಿರುವುದು ನಮ್ಮ ಅದೃಷ್ಟವೆಂದೇ ರೈತಾಪಿ ಸಮುದಾಯ ನಂಬಿತ್ತು. ಆದರೆ ಅದು ಹುಸಿಯಾದಂತೆ ಕಾಣಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ತುಮಕೂರು ಶಾಖಾ ಕಾಲುವೆ ಮೂಲಕ 85 ಸಾವಿರ ಹೆಕ್ಟೇರು ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ಸುಮಾರು 131 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಯೋಜನಾ ವ್ಯಾಪ್ತಿಗೆ ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ತಾಲೂಕು ಸೇರಿದೆ. ಹಾಗಾಗಿ ಭದ್ರಾ ಕಾಮಗಾರಿ ಪೂರ್ಣಗೊಳಿಸುವಲ್ಲಿ ಸಚಿವರಾಗಿಯಷ್ಟೇ ಅಲ್ಲ, ಸಂಸದರಾಗಿಯೂ ತಾವು ತಮ್ಮ ಕರ್ತವ್ಯ ನಿಭಾಯಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ನಿಟ್ಟಿನಲ್ಲಿ ದೆಹಲಿಗೆ ಕಡತ ಹೊತ್ತೊಯ್ದು ಎಲ್ಲ ಕ್ಲಿಯರೆನ್ಸ್ ಮಾಡಿಸಿದ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಲಿ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಕರ್ನಾಟಕದ ಪರವಾಗಿ ಬಹುದೊಡ್ಡ ಶಕ್ತಿಯೇ ಸಂಸತ್ ನಲ್ಲಿ ಪಾಲು ಪಡೆದಿದೆ. ಆದರೆ ಈ ನೆಲದ ಸ್ವಾಭಿಮಾನ, ರೈತರ ಭವಿಷ್ಯದ ಬದುಕಿನ ಪ್ರಶ್ನೆಯಾಗಿರುವ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಜನ ಪ್ರತಿನಿಧಿಗಳು ಏರಿದ ದನಿಯಲ್ಲಿ ಕೇಂದ್ರದ ಮುಂದೆ ದನಿ ಎತ್ತಿ ಅನುದಾನ ತರುವಲ್ಲಿ ವಿಫಲರಾಗಿರುವುದು ನೋವಿನ ಸಂಗತಿ ಎಂದರು.

ಭದ್ರಾ ಮೇಲ್ದಂಡೆಗೆ ₹5300 ಕೋಟಿ ಅನುದಾನದ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗ ನೆಲದಲ್ಲಿಯೇ ನಿಂತು ಘೋಷಣೆ ಮಾಡಿದ್ದರು. 2023-24 ಸಾಲಿನ ಬಜೆಟ್ ನಲ್ಲಿ ಇದು ನಮೂದಾಗಿದೆ. ಬಿಜೆಪಿಯವರೇ ಕೇಂದ್ರದ ಮುಂದೆ ಭದ್ರಾ ಮೇಲ್ದಂಡೆ ಕಡತ ಒಯ್ದು ಹೊಸ ಕೂಸು ಹುಟ್ಟಿಸಿ, ರಾಷ್ಟ್ರೀಯ ಯೋಜನೆ ನಾಮಕರಣ ಮಾಡಿ ಕುಲಾವಿ ತೊಡಿಸಿದ್ದರು. ಈ ಕೂಸನ್ನು ಲಾಲನೆ ಪಾಲನೆ ಮಾಡುವುದ ಬಿಟ್ಟು ಕತ್ತು ಹಿಸುಕಲು ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎಂ. ಚಂದ್ರಪ್ಪ, ಕೆ.ಎಸ್. ನವೀನ್, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಕೆ.ಪಿ. ಭೂತಯ್ಯ, ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಸರ್ವೋದಯ ಕರ್ನಾಟಕದ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿ, ರೈತ ಸಂಘದ ಹುಣಿಸೆಕಟ್ಟೆ ಕಾಂತರಾಜ್, ಸಜ್ಜನಕೆರೆ ರೇವಣ್ಣ, ಓಂಕಾರಪ್ಪ, ಹುಣಿಸೆಕಟ್ಟೆ ಮಹಂತೇಶ್, ಕೆಂಚಪ್ಪ ಕಳ್ಳಿರೊಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ. ಶೇಖರ್, ಲಿಂಗಾವರಟ್ಟಿ ಕುಬೇರರೆಡ್ಡಿ, ಬಾಳೆಕಾಯಿ ತಿಪ್ಪೇಸ್ವಾಮಿ, ಡಿ.ಎಸ್. ಹಳ್ಳಿ ಕೃಷ್ಣಾರೆಡ್ಡಿ, ಲಕ್ಷ್ಮಣರೆಡ್ಡಿ, ನಗರಸಭೆ ಮಾಜಿ ಸದಸ್ಯ ಜಿ.ಎನ್. ಲಿಂಗರಾಜ್, ಅಪ್ಪಣ್ಣರೆಡ್ಡಿ, ಲಕ್ಷ್ಮಿನಾರಾಯಣರೆಡ್ಡಿ, ರಜನಿ ಶಂಕರ್ ಈ ವೇಳೆ ಉಪಸ್ಥಿತರಿದ್ದರು.

-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!