ವಿಜಯದಶಮಿಯಂದು ಶಿರಸಿಯ ಟ್ರಾಫಿಕ್ ಪೊಲೀಸ್ ಠಾಣೆ ಪ್ರಾರಂಭ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork | Published : Oct 3, 2024 1:32 AM

ಸಾರಾಂಶ

ಅಬಕಾರಿ ಇಲಾಖೆ ಅಧೀನದಲ್ಲಿರುವ ಟಿವಿ ಸ್ಟೇಷನ್ ಜಾಗ ಪಾಳು ಬಿದ್ದಿದೆ. ಈ ಜಾಗದಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸ್ ಠಾಣೆಯನ್ನು ಆರಂಭಿಸುವುದನ್ನು ಅಂತಿಮಗೊಳಿಸಲಾಯಿತು.

ಶಿರಸಿ: ನಗರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಗುರುತಿಸಲಾದ ಟಿವಿ ಸ್ಟೇಷನ್ ಜಾಗವನ್ನು ಬುಧವಾರ ಶಾಸಕ ಭೀಮಣ್ಣ ನಾಯ್ಕ ಪರಿಶೀಲನೆ ನಡೆಸಿದರು.ಕಾರವಾರದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಶಿರಸಿಯಲ್ಲಿ ಶೀಘ್ರವಾಗಿ ಸಂಚಾರ ಪೊಲೀಸ್ ಠಾಣೆ ಆರಂಭಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ತಾತ್ಕಾಲಿಕ ಠಾಣೆ ಆರಂಭಿಸುವುದನ್ನು ಡಿಎಸ್‌ಪಿ ಕೆ.ಎಲ್. ಗಣೇಶ ಹಾಗೂ ಸಿಪಿಐ ಶಶಿಕಾಂತ ವರ್ಮಾ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳ ಕಟ್ಟಡಗಳನ್ನು ಪರಿಶೀಲಿಸಿದ್ದರು. ನಂತರ ಟಿವಿ ಸ್ಟೇಷನ್ ಜಾಗದ ಕಟ್ಟಡವನ್ನು ಅಂತಿಮಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ, ಪರಿಶೀಲಿಸಿದರು. ಅಬಕಾರಿ ಇಲಾಖೆ ಅಧೀನದಲ್ಲಿರುವ ಟಿವಿ ಸ್ಟೇಷನ್ ಜಾಗ ಪಾಳು ಬಿದ್ದಿದೆ. ಈ ಜಾಗದಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸ್ ಠಾಣೆಯನ್ನು ಆರಂಭಿಸುವುದನ್ನು ಅಂತಿಮಗೊಳಿಸಲಾಯಿತು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಒಂದು ವಾರದಲ್ಲಿ ಸಂಚಾರಿ ಪೊಲೀಸ್ ಠಾಣೆ ಪ್ರಾರಂಭಗೊಳ್ಳಲೇಬೇಕು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮಾತನಾಡಿದ್ದೇನೆ. ನಿರುಪಯುಕ್ತ ಕಟ್ಟಡವಾಗಿದ್ದ ಹಳೇ ಟಿವಿ ಸ್ಟೇಷನ್ ಕಟ್ಟಡವನ್ನು ತಕ್ಷಣವೇ ಸಂಚಾರಿ ಪೊಲೀಸ್ ಠಾಣೆಗೆ ತಾತ್ಕಾಲಿಕವಾಗಿ ನೀಡಬೇಕೆಂದು ಪರಿಶೀಲನೆ ವೇಳೆಯಲ್ಲೇ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಸೂಚಿಸಿದರು. ಅಲ್ಲದೇ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಕಾಂತರಾಜ್ ಅವರಿಗೆ ಗುರುವಾರ ಸ್ವಚ್ಛತೆ ಪ್ರಾರಂಭಿಸುವಂತೆ ತಿಳಿಸಿದರು. ವಿಜಯದಶಮಿ ದಿನದಂದು ಪೊಲೀಸ್ ಠಾಣೆ ಪ್ರಾರಂಭಗೊಳಿಸುವಂತೆ ಡಿವೈಎಸ್ಪಿ ಗಣೇಶ ಕೆ.ಎಲ್. ಅವರಿಗೆ ನಿರ್ದೇಶಿಸಿದರು.ಸುಮಾರು ೨ಎಕರೆ ವಿಸ್ತೀರ್ಣದಲ್ಲಿರುವ ಜಾಗದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಗುರುವಾರದಿಂದ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭವಾಗಲಿದ್ದು, ವಿಜಯದಶಮಿಯಂದು ಶಿರಸಿಯಲ್ಲಿ ನೂತನವಾಗಿ ಟ್ರಾಫಿಕ್ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಲಿದೆ.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ನಗರಸಭೆ ಪೌರಾಯುಕ್ತ ಕಾಂತರಾಜ್, ಡಿವೈಎಸ್ಪಿ ಗಣೇಶ ಕೆ.ಎಲ್., ಪಿಎಸ್‌ಐಗಳಾದ ನಾಗಪ್ಪ ಬಿ., ರಾಜಕುಮಾರ್ ಉಕ್ಕಲಿ, ಮಹಾಂತೇಶ್ ಕುಂಬಾರ ಹಾಗೂ ಸಿಬ್ಬಂದಿ ಇದ್ದರು. ಮರಳು ಸಮಸ್ಯೆಗೆ ಬಿಜೆಪಿ ಕಾರಣ: ಸಚಿವ ಮಂಕಾಳ ವೈದ್ಯ

ಭಟ್ಕಳ: ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಗೆ ಬಿಜೆಪಿಯವರೇ ನೇರವಾಗಿ ಕಾರಣರಾಗಿದ್ದಾರೆ. ಇವರು ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಹಸಿರು ಪೀಠಕ್ಕೆ ಹೋಗಿದ್ದರಿಂದ ಮರಳು ಸಮಸ್ಯೆ ಬಗೆಹರಿಸಲು ಕಷ್ಟದಾಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತಲೆದೋರಿರುವುದರಿಂದ ಮನೆ, ಕಟ್ಟಡ ಮತ್ತಿತರ ಕಾಮಗಾರಿ ನಡೆಸಲು ತೊಂದರೆ ಆಗಿದೆ. ಮರಳು ಸರಬರಾಜು ಆಗದೇ ಅಭಿವೃದ್ಧಿಗೂ ಹಿನ್ನಡೆ ಆಗಿದೆ. ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಹಸಿರು ಪೀಠಕ್ಕೆ ಹೋಗಿದ್ದರಿಂದ ಜಿಲ್ಲೆಯಲ್ಲಿ ಮರಳುಗಾರಿಕೆಗೆ ತಡೆಯಾಗಿದೆ. ಬಿಜೆಪಿಯವರು ದೂರು ಹಿಂಪಡೆದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಸರ್ಕಾರಕ್ಕೆ ಮರಳಿನ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಮನಸ್ಸಿದ್ದರೂ ಬಿಜೆಪಿಯವರಿಂದಾಗಿ ಹಿನ್ನಡೆ ಆಗಿದೆ. ಜಿಲ್ಲೆಯಲ್ಲಿ ಮರಳು ಸಮಸ್ಯೆ ತಲೆದೋರಲು ಬಿಜೆಪಿಯವರೇ ನೇರ ಕಾರಣ ಹೊರತು ನಾವಲ್ಲ. ಬಿಜೆಪಿಯ ಯಾವ ಮುಖಂಡರು ಹಸಿರು ಪೀಠಕ್ಕೆ ಹೋಗಿದ್ದಾರೆ ಎನ್ನುವ ಕುರಿತು ವಿವರವಾದ ಮಾಹಿತಿ ನೀಡಿಲು ಸಿದ್ಧನಿದ್ದೇನೆ ಎಂದರು.

Share this article