ಜಿಲ್ಲಾ ಖನಿಜ ಅಭಿವೃದ್ಧಿ ನಿಗಮದಿಂದ ನಾಲ್ಕು ಕೋಟಿ ರು. ಮಂಜೂರು: ಶಾಸಕ ನಂಜೇಗೌಡ
ಯೋಜನೆಗೆ ಸಿದ್ಧತೆ, ರಸ್ತೆ ಕಾಮಗಾರಿಗೆ ಹಣ, ಕೊಮ್ಮನಹಳ್ಳಿಯಲ್ಲಿ ಶಾಲೆ, ಶಾಸಕ ನಂಜೇಗೌಡ, ರಂಗಮಂದಿರ ಅಭಿವೃದ್ಧಿ, ಕೋಲಾರಕನ್ನಡಪ್ರಭ ವಾರ್ತೆ ಮಾಲೂರು
ಜಿಲ್ಲಾ ಖನಿಜ ಅಭಿವೃದ್ಧಿ ನಿಗಮದಿಂದ ಕೋಟಿ ರು.ಗಳ ಅನುದಾನ ಮಂಜೂರಾಗಿದ್ದು, ಅದರಲ್ಲಿ ಮಾಸ್ತಿ ಬಸ್ ನಿಲ್ದಾಣ ಹಾಗೂ ಪಟ್ಟಣದ ಪುರಸಭೆ ಆವರಣದಲ್ಲಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.ಅವರು ಇಲ್ಲಿನ ಪುರಸಭೆ ಅವರಣದಲ್ಲಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗ ಮಂದಿರದ ದುಸ್ಥಿತಿಯನ್ನು ವೀಕ್ಷಿಸಿದ ನಂತರ ಮಾತನಾಡಿ,ಇದಕ್ಕೆ ಸಂಬಂಧಿಸಿದ ಯೋಜನೆಯನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಪುರಸಭಾ ಅಧಿಕಾರಿಗಳು ಯೋಜನೆ ಸಿದ್ಧಪಡಿಸುವಂತೆ ಹೇಳಿದರು.
ರಂಗಮಂದಿರಕ್ಕೆ ಸೌಲಭ್ಯಪಟ್ಟಣದ ಪುರಸಭೆ ಆವರಣದಲ್ಲಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದ ಕಾಮಗಾರಿ ಪೂರ್ಣಗೊಂಡಿದ್ದರೂ ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ತಾಲೂಕಿಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ನಿಗದಿಪಡಿಸಿದ್ದಾರೆ. ವಿಜಯಪುರದಿಂದ ಸಂಪಂಗೆರೆ ಗಡಿಯವರೆಗಿನ ರಸ್ತೆಯನ್ನು ೬ ಪಥದ ರಸ್ತೆಯನ್ನಾಗಿಸಲು ಸುಮಾರು ೧೭೮೦ ಕೋಟಿ ಹಾಗೂ ಪಟ್ಟಣದ ಮುಖ್ಯರಸ್ತೆ ಎಪಿಎಂಸಿ ಕಚೇರಿಯಿಂದ ರೈಲ್ವೆ ಸೇತುವೆ ವರೆಗಿನ ರಸ್ತೆಯನ್ನು ೨೮೦ ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು. ತಾಲೂಕಿನಲ್ಲಿ ಹದಗೆಟ್ಟ ೭೦ ಕಿಲೋಮೀಟರ್ ಗ್ರಾಮಾಂತರ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ೨೫ ಕೋಟಿ ರು.ಗಳ ಅನುದಾನ ನೀಡಿದೆ . ಈಗಾಗಲೇ ೩೫ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರೀಯೆ ಮುಗಿಯಲಿದೆ ಪಟ್ಟಣದ ಬಸ್ ನಿಲ್ದಾಣವನ್ನು ೧೫ ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.ಕೊಮ್ಮನಹಳ್ಳಿ ಶಾಲೆ ನಿರ್ಮಾಣ
ತಾಲೂಕಿನ ನಮ್ಮ ಸ್ವ-ಗ್ರಾಮವಾದ ಕೊಮ್ಮನಹಳ್ಳಿ ಗ್ರಾಮದಲ್ಲಿ ನಾನು ಓದಿದ ಸರ್ಕಾರಿ ಶಾಲೆ ಶಿಥಿಲವಾಗಿದ್ದು, ಸುಸಜ್ಜಿತವಾದ ಶಾಲಾ ಕಟ್ಟಡವನ್ನು ನಿರ್ಮಿಸುವ ಉದ್ದೇಶದಿಂದ ನನ್ನ ಸಹೋದರ ಈರಣ್ಣ ನಮ್ಮ ತಂದೆ ತಾಯಿ ಸ್ಮರಣಾರ್ಥ ಶಾಲೆ ನಿರ್ಮಾಣಕ್ಕೆ ಒಂದು ಎಕರೆ ಜಮೀನು ನೀಡಿದ್ದು, ಸರ್ಕಾರದ ಒಂದು ಕೋಟಿ ರು.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಅಭಿಯಂತರ ಅಶ್ವಿನ್ ಬಾಬು, ಪುರಸಭಾ ಸದಸ್ಯರಾದ ಎ.ರಾಜಪ್ಪ, ಆರ್ ವೆಂಕಟೇಶ್, ಇಂತಿಯಾಜ್ ಖಾನ್, ರಾಮಮೂರ್ತಿ, ಬಾನುತೇಜ, ವಿಜಯಲಕ್ಷ್ಮಿ, ಭಾರತಿ, ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ಅಭಿಯಂತರರಾದ ಶಾಲಿನಿ, ನೋಡಲ್ ನಾಗರಾಜ್, ಸಿಎಒ ಮಂಜುನಾಥ್, ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸ್, ರಾಜಣ್ಣ, ವೆಂಕಟೇಶ್ ಇನ್ನಿತರರು ಹಾಜರಿದ್ದರು.