ಕುಷ್ಟಗಿ:
ಹೈದರಾಬಾದ್ ಕರ್ನಾಟಕವನ್ನು ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಲಾಗಿದೆಯೆ ಹೊರತು ಈ ಭಾಗಕ್ಕೆ ಸಲ್ಲಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಘೋಷಣೆಯಲ್ಲಿ ಮಾತ್ರ ಅನುದಾನ ಮಂಜೂರು ಆದರೆ ಕಲ್ಯಾಣ ಕರ್ನಾಟಕವಾಗಿ ನಿರ್ಮಾಣವಾಗಲು ಹೇಗೆ ಸಾಧ್ಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ನಡೆದ 78ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೈದರಾಬಾದ್ ಪ್ರಾಂತ್ಯವನ್ನು ನಿಜಾಮರು, ರಜಾಕಾರರು ಮುಷ್ಟಿಯಲ್ಲಿ ಇಟ್ಟುಕೊಂಡು ಇಲ್ಲಿನ ಸಂಪತ್ತು ಲೂಟಿ ಮಾಡುವುದು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಕಂಡ ಮಹನೀಯರು, ನಿಜಾಮರ ವಿರುದ್ದ ಹೋರಾಟ ನಡೆಸಿ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಗುವಂತೆ ಮಾಡಿದ್ದಾರೆ ಎಂದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಹಲವು ಹೋರಾಟಗಾರರು ಶಿಬಿರ ಸ್ಥಾಪಿಸಿ ಹೋರಾಟ ಮಾಡಿ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಪ್ರಗತಿ ಪರ ರೈತ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ವಿದ್ಯಾವಂತರು ಹೇರಳವಾಗಿದ್ದರೂ ಮಾನವೀಯ ಮೌಲ್ಯ ಕಡಿಮೆ ಆಗುತ್ತಿವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಉತ್ತಮ ಪ್ರಜೆಗಳಾಗಿ ನಿರ್ಮಿಸಬೇಕೆಂದು ಕರೆ ನೀಡಿದರು. ಈ ವೇಳೆ ಅವರನ್ನು ಸನ್ಮಾನಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಈ ವೇಳೆ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ತಾಪಂ ಇಒ ಪಂಪಾಪತಿ ಹಿರೇಮಠ, ಪ್ರಭಾರಿ ಬಿಇಒ ಜಗದೀಶಪ್ಪ ಎಂ, ಗ್ರೇಡ್-2 ತಹಸೀಲ್ದಾರ್ ರಜನಿಕಾಂತ ಕೆಂಗಾರಿ, ಪುರಸಭೆ ಮುಖ್ಯಾಧಿಕಾರಿ ವೆಂಕಣ್ಣ ಬೀಳಗಿ, ಪ್ರಾಚಾರ್ಯ ಡಾ. ಎಸ್.ವಿ. ಡಾಣಿ, ಸಿಡಿಪಿಒ ಯಲ್ಲಮ್ಮ ಹಂಡಿ, ನಜಿರಸಾಬ್ ಮೂಲಿಮನಿ, ತಾಜುದ್ದೀನ್, ವೀರಪ್ಪ, ಎಇಇ ಸುಧಾಕರ ಕಾತರಕಿ ಸೇರಿದಂತೆ ಅನೇಕರು ಇದ್ದರು.
ವಿವಿಧೆಡೆ ಆಚರಣೆ:ತಾಪಂ, ಪುರಸಭೆ, ಶಾಸಕರ ಕಾರ್ಯಾಲಯ, ದೋಟಿಹಾಳ ಗ್ರಾಪಂ, ಕೇಸೂರು ಗ್ರಾಪಂ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು.