ಬಂದಿಲ್ಲ ಅನುದಾನ: ಅರ್ಧಕ್ಕೆ ನಿಂತ ಸಮುದಾಯ ಭವನ

KannadaprabhaNewsNetwork | Published : Jul 27, 2024 12:52 AM

ಸಾರಾಂಶ

ಕಳೆದ 9 ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ಇಂಡಿ ತಾಲೂಕಿನ 4 ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿವೆ. ಹೀಗಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಮ್‌ ಸಮುದಾಯ ಭವನಗಳ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಅರ್ಧ ಹಾದಿಯನ್ನೇ ಸವೆಸಿವೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿಕಳೆದ 9 ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ಇಂಡಿ ತಾಲೂಕಿನ 4 ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿವೆ. ಹೀಗಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಮ್‌ ಸಮುದಾಯ ಭವನಗಳ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಅರ್ಧ ಹಾದಿಯನ್ನೇ ಸವೆಸಿವೆ.

2014-15ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಪ್ರತಿ ಸಮುದಾಯ ಭವನಕ್ಕೆ ತಲಾ ₹12 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ ಭವನ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದ್ದರು. ಲ್ಯಾಂಡ್‌ ಆರ್ಮಿ ಏಜೆನ್ಸಿಯಿಂದ ಕಟ್ಟಡ ಕಾಮಗಾರಿ ನಡೆದು, ಗೋಡೆ ಹಂತದವರೆಗೆ, ಕೆಲವೊಂದು ಸ್ಲ್ಯಾಬ್‌ ಹಂತದವರೆಗೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೆ ತಲಾ ಸಮುದಾಯ ಭವನಕ್ಕೆ ಕೇವಲ ₹3 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದ ತಲಾ 9 ಲಕ್ಷ ಅನುದಾನ (ಒಟ್ಟು 36 ಲಕ್ಷ) 9 ವರ್ಷವಾದರೂ ಬಿಡುಗಡೆಯಾಗಿಲ್ಲ.ಎಲ್ಲೆಲ್ಲಿ ನಿರ್ಮಿಸಲಾಗುತ್ತಿದೆ?:

ಇಂಡಿ ತಾಲೂಕಿನ ಜೇವೂರ, ಬೈರುಣಗಿ, ನಂದ್ರಾಳ, ಸಿಗಣಾಪೂರ ಗ್ರಾಮದಲ್ಲಿ ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ ಭವನಗಳು ಮಂಜೂರಾಗಿವೆ. ಸಮುದಾಯ ಭವನಕ್ಕೆ ತಲಾ 12 ಲಕ್ಷ ರೂ.ಗಳು ಮಂಜೂರು ಆಗಿದೆ. ಆದರೆ 9 ವರ್ಷ ಕಳೆದರೂ ಪ್ರತಿ ಭವನಕ್ಕೆ ಕೇವಲ ₹3 ಲಕ್ಷ ಅನುದಾನ ಮಾತ್ರ ಬಿಡುಗಡೆಗೊಂಡಿದೆ. ಉಳಿದ ಅನುದಾನ ಬಿಡುಗಡೆಯಾಗದ ಕಾರಣ ಸಮುದಾಯ ಭವನಗಳು ಅರ್ಧಕ್ಕೆ ನಿಂತಿವೆ. ಇದರಿಂದಾಗಿ ಭವನಗಳ ಸುತ್ತ ಜಾಲಿಕಂಟಿ, ಹುಲ್ಲು ಬೆಳೆದಿವೆ. ಕೆಲವೊಂದು ಭವನಗಳಿಗೆ ಕಿಟಕಿ, ಬಾಗಿಲುಗಳು ಇಲ್ಲದೆ ಇರುವುದರಿಂದ ಹಾಳುಬಿದ್ದಿವೆ.ದುಸ್ಥಿತಿಯಲ್ಲಿ ಸಮುದಾಯ ಭವನಗಳು:

ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಇಂಡಿ ಹಾಗೂ ಚಡಚಣ ತಾಲೂಕುಗಳಲ್ಲಿ ಮಂಜೂರಾದ ಅಂಬೇಡ್ಕರ ಹಾಗೂ ಬಾಬು ಜಗಜಿವನರಾಮ ಭವನಗಳು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಮುದಾಯ ಭವನಗಳಿಗೆ ಬಿಡುಗಡೆಯಾಗಬೇಕಾದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರ ನಡುವೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರುಪಯೋಗ ಕೂಡ ಕೇಳಿಬಂದಿರುವುದರಿಂದ ಈ ಭವನಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವುದು ಕೂಡ ದುಸ್ತರವೇ ಸರಿ ಎನ್ನಲಾಗುತ್ತಿದೆ. ಹೀಗಾಗಿ ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್‌ ಭವನಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ (2024-25ನೇ) ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮಳೆಗಾಲದಲ್ಲಿ ಅರ್ಧಕ್ಕೆ ನಿಂತ ಅಂಬೇಡ್ಕರ ಭವನಗಳ ಇಟ್ಟಿಗೆ, ಸಿಮೆಂಟ್‌ ಕರಗಿ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದುವರೆಗೆ ಮಾಡಿದ ಶ್ರಮ ಕೂಡ ವ್ಯರ್ಥವಾಗುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗದಂತೆ ತಡೆಯಲು ಕೂಡಲೇ ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ನಾಗರಿಕರಿಂದ ಒತ್ತಡ ಕೂಡ ಕೇಳಿಬರುತ್ತಿದೆ.ಪತ್ರ ಬರೆದರೂ ಪ್ರಯೋಜನವಿಲ್ಲ:

ನಿರ್ಮಾಣದ ಹೊಣೆಗಾರಿಕೆಯನ್ನು ಲ್ಯಾಂಡ್‌ಆರ್ಮಿ ಇಲಾಖೆಗೆ ಗುತ್ತಿಗೆ ಏಜೆನ್ಸಿ ನೀಡಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆಯಾಗದ ಕಾರಣ ಲ್ಯಾಂಡ್‌ಆರ್ಮಿ ಏಜೆನ್ಸಿಯು ಅನುದಾನಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಬರೆದು ಸುಸ್ತಾಗಿ ಕೈಚೆಲ್ಲಿ ಬಿಟ್ಟಿದ್ದಾರೆ.ಕಳೆದ 10 ವರ್ಷಗಳ ಹಿಂದೆ ಆರಂಭಗೊಂಡಿರುವ ಸಮುದಾಯ ಭವನಗಳು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅದರ ಖರ್ಚು ವೆಚ್ಚಗಳು ಕೂಡ ಹೆಚ್ಚಳವಾಗುತ್ತವೆ. ಕಳೆದ 10 ವರ್ಷಗಳ ಹಿಂದೆ ಇದ್ದ ಕಟ್ಟಡ ಸಾಮಗ್ರಿಗಳ ಬೆಲೆ, ಸಿಮೆಂಟ್‌ ದರ ಈಗಿನ ದರಕ್ಕೂ ವ್ಯತ್ಯಸವಾಗಿದೆ. ಹೀಗಾಗಿ ಖರ್ಚು ವೆಚ್ಚದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ ಇದೆ.ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು 9 ವರ್ಷಗಳ ಹಿಂದೆ ಆರಂಭಗೊಂಡ ಅಂಬೇಡ್ಕರ, ಬಾಬು ಜಗಜಿವನರಾಮ ಭವನಗಳಿಗೆ ಅನುದಾನ ಬಿಡುಗಡೆಗೊಳಿಸಿ, ಕಟ್ಟಡಗಳು ಪೂರ್ಣಗೊಳಿಸಿ ಸಮುದಾಯದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.2014-15ರಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ ಭವನಗಳು ಮಂಜೂರಾಗಿದ್ದು ನಿಜ. 2016ರಲ್ಲಿ ಅವುಗಳಿಗೆ ನಾಲ್ಕರಲ್ಲಿ ಒಂದು ಭಾಗ ಅಂದರೆ ₹3 ಲಕ್ಷ ಅನುದಾನ ಮಂಜೂರಾಗಿದೆ. ಉಳಿದ ಅನುದಾನ ಬಿಡುಗಡೆಗೆ ಫಾಲೋಅಪ್‌ ಆಗಬೇಕಿತ್ತು. ಆಗಿಲ್ಲ. ಸದ್ಯ ಜಿಲ್ಲೆಯ 6 ಭವನಗಳಿಗೆ ಆಗುವಷ್ಟು ಅನುದಾನ ಬಿಡುಗಡೆಯಾಗಿದೆ. ಇಂಡಿ, ಚಡಚಣ ಸೇರಿ ಅಂದಾಜು 12 ಭವನಗಳು ಇರಬೇಕು. ಅರ್ಧಕ್ಕೆ ನಿಂತ ಭವನಗಳ ಅನುದಾನ ಬಿಡುಗಡೆಗೆ ಕಡತಗಳನ್ನು ಪುಟ್‌ಅಪ್‌ ಮಾಡಲಾಗುತ್ತದೆ. ಸದ್ಯ ಬಂದಿರುವ ಅನುದಾನ ಅರ್ಧಕ್ಕೆ ನಿಂತ ಭವನಗಳನ್ನು ಪೂರ್ಣಗೊಳಿಸಲು ಏಜೆನ್ಸಿಗೆ ಸೂಚಿಸಲಾಗುತ್ತದೆ.

- ಪುಂಡಲೀಕ ಮಾನವರ,

ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪುರ.ಅನುದಾನದ ಕೊರತೆಯಿಂದ ಭವನಗಳು ಅರ್ಧಕ್ಕೆ ನಿಂತಿವೆ. ಅನುದಾನ ಬಿಡುಗಡೆಯಾದ ಕೂಡಲೇ ಭವನಗಳು ಪೂರ್ಣಗೊಳಿಸಲಾಗುತ್ತದೆ. ಅನುದಾನ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಸಮಾಜ ಕಲ್ಯಾಣ ಇಲಾಖೆಗೆ ಕೇಳಿನೋಡಿ.

- ಆನಂದ ಸ್ವಾಮಿ,
ಎಇಇ,ಲ್ಯಾಂಡ್‌ಆರ್ಮಿ, ಇಂಡಿ.

Share this article