ಜೂನ್‌ 29ಕ್ಕೆ ಶಿಕ್ಷಕರಿಗೆ ಕೃತಜ್ಞತೆ, ಕೆ.ವಿವೇಕಾನಂದರಿಗೆ ಅಭಿನಂದನೆ: ಬೋರೇಗೌಡ

KannadaprabhaNewsNetwork | Published : Jun 29, 2024 12:34 AM

ಸಾರಾಂಶ

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಮನ್ಮುಲ್ ನಿರ್ದೇಶಕ ಬಿ.ಆರ್. ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ವಿವೇಕಾನಂದ ಅಭಿನಂದನಾ ಸಮಿತಿಯಿಂದ ಜೂ.29 ರಂದು ಶಿಕ್ಷಕರಿಗೆ ಕೃತಜ್ಞತೆ ಮತ್ತು ವಿಧಾನ ಪರಿಷತ್ ನೂತನ ಸದಸ್ಯ ಕೆ.ವಿವೇಕಾನಂದರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬೋರೇಗೌಡ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರಂಭದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ನೂತನ ಸದಸ್ಯರಾಗಿ ತಮಗೆ ಅಭೂತಪೂರ್ವ ಗೆಲುವು ತಂದುಕೊಟ್ಟ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರಿಗೆ ಕೆ.ವಿವೇಕಾನಂದ ಅವರು ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಮನ್ಮುಲ್ ನಿರ್ದೇಶಕ ಬಿ.ಆರ್. ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಉದ್ಘಾಟಿಸಲಿದ್ದಾರೆ ಎಂದರು.

ಜಾನಪದ ವಿದ್ವಾಂಸ ವ.ನಂ.ಶಿವರಾಮು ಅವರು ವಿಧಾನ ಪರಿಷತ್ ನೂತನ ಸದಸ್ಯ ಕೆ.ವಿವೇಕಾನಂದ ಅವರನ್ನು ಅಭಿನಂದಿಸಲಿದ್ದಾರೆ. ಅತಿಥಿಗಳಾಗಿ ಜೆಎಸ್ಎಸ್ ವಿದ್ಯಾಪೀಠದ ನಿರ್ದೇಶಕ ಬಿ.ನಿರಂಜನ ಮೂರ್ತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು, ಮಾಂಡವ್ಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಸರ್ಕಾರಿ ನೌಕರ ಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಂಭುಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚೆಲುವಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಮೇಗೌಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ಭಾಗವಹಿಸಲಿದ್ದಾರೆ ಎಂದರು.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡರು 24 ವರ್ಷದಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ಶಿಕ್ಷಕರ ಸಮಸ್ಯೆ ಬಗೆಹರಿಸಿಲ್ಲ. ಅಲ್ಲದೇ, ಶಿಕ್ಷಕ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು ಹಾಗಾಗಿ ವಿವೇಕಾನಂದ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಆಶಾಭಾವನೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ವಿ.ರಮೇಶ್, ನಾಗೇಂದ್ರ ರಾವ್, ಡಿ.ರಮೇಶ್ , ಶ್ರೀಕಾಂತ್, ಕೆ.ಆರ್.ರಾಜು ಇದ್ದರು.

ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಹಲಗೂರು: ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜೂ.29 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1:30ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಾರತೀನಗರ ಜಿ.ಮಾದೇಗೌಡ ಆಸ್ಪತ್ರೆ, ಮತ್ತು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ತೊರೆಕಾಡನಹಳ್ಳಿ ಮತ್ತು ಹಲಗೂರು ವಲಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಭಾರತಿನಗರದ ಮಾದೇಗೌಡ ಆಸ್ಪತ್ರೆ ಶ್ರೀರೋಗ ತಜ್ಞೆ ಶ್ವೇತ, ಪಿಜಿಸಿಯನ್ ರಾಜು, ಹಲಗೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸೌಮ್ಯಶ್ರೀ ಸೇರಿದಂತೆ ಇತರರು ಭಾಗವಹಿಸಿ ರೋಗಿಗಳ ತಪಾಸಣೆ ನಡೆಸುವರು. ಹಲಗೂರು ಸುತ್ತ ಮುತ್ತಲಿನ ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ಧರ್ಮಸ್ಥಳ ಸಂಘದ ಹಲಗೂರು ಮತ್ತು ತೊರೆಕಾಡನಹಳ್ಳಿ ವಲೆಯಾದ ಮೇಲ್ವಿಚಾರಕಿ ಲಕ್ಷ್ಮಿ ಮನವಿ ಮಾಡಿದ್ದಾರೆ.ಇಂದು ಜನ ಸಂಪರ್ಕ ಸಭೆಮದ್ದೂರು: ಪಟ್ಟಣದ ಚೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಜೂ.29ರಂದು ತ್ರೈಮಾಸಿಕ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ. ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ವಿತರಣೆಗೆ ಸಂಬಂಧಿಸಿದ ದೂರುಗಳು ಮತ್ತು ಆಹ್ವಾನಗಳನ್ನು ಸ್ವೀಕರಿಸಿ ಅವುಗಳನ್ನು ಬಗೆಹರಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸುವ ಮೂಲಕ ಅಹವಾಲು ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

Share this article