ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರ

KannadaprabhaNewsNetwork |  
Published : Nov 01, 2024, 12:11 AM ISTUpdated : Nov 01, 2024, 12:12 AM IST
ಹೂವಿನ ವ್ಯಾಪಾರ | Kannada Prabha

ಸಾರಾಂಶ

ಜಿ.ಕೆ. ಬಂಡಿ ಗಾರ್ಡನ್ ರಸ್ತೆಯಲ್ಲಿ ಹಣ್ಣು, ತರಕಾರಿ, ಅಲಂಕಾರಿಕ ವಸ್ತು, ಕಬ್ಬು, ಹೂ, ಬಾಳೆ ದಿಂಡು, ಡೈರಿ ಹೂವಿನ ಗಿಡಗಳ ಮಾರಾಟ

ಗಜೇಂದ್ರಗಡ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾಗುವ ಪೂಜಾ ಪರಿಕರಗಳ ಖರೀದಿಗೆ ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದು, ರೋಣ ರಸ್ತೆಯ ಎಪಿಎಂಸಿ ಎದುರಿನ ಬಯಲು ಜಾಗ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನಜಂಗುಳಿ ಹಾಗೂ ವ್ಯಾಪಾರ ವಹಿವಾಟು ಮಾರುಕಟ್ಟೆಗೆ ಹೊಸ ಕಳೆ ತಂದಿದೆ.

ದೀಪಾವಳಿ ಅಮಾವಾಸ್ಯೆ ಮತ್ತು ಪಾಡ್ಯ ಪೂಜೆಗೆ ಬೇಕಾಗುವ ಹೂ, ಹಣ್ಣು, ಕಬ್ಬು, ಬಾಳೆ ದಿಂಡು, ಅಲಂಕಾರಿಕ ವಸ್ತುಗಳು ಇನ್ನಿತರ ವಸ್ತು ಖರೀದಿಸಲು ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿನ ಎಪಿಎಂಸಿ ಎದುರಿನ ಬಯಲು ಜಾಗ ಹಾಗೂ ಜಿ.ಕೆ. ಬಂಡಿ ಗಾರ್ಡನ್ ರಸ್ತೆಯಲ್ಲಿ ಹಣ್ಣು, ತರಕಾರಿ, ಅಲಂಕಾರಿಕ ವಸ್ತು, ಕಬ್ಬು, ಹೂ, ಬಾಳೆ ದಿಂಡು, ಡೈರಿ ಹೂವಿನ ಗಿಡಗಳ ಮಾರಾಟ ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ಒಂದು ಜತೆ ಬಾಳೆ ದಿಂಡಿಗೆ ₹೩೦-೫೦, ಐದು ಕಬ್ಬು ಇರುವ ಒಂದು ಕಟ್ಟಿಗೆ ₹ ೫೦-೧೦೦, ಡೈರಿ ಹೂವಿನ ಗಿಡಗಳಿಗೆ ₹೧೦-೨೦, ಒಂದು ಮಳ ಸೇವಂತಿಗೆ ₹೩೦ ಹಾಗೂ ಐದು ಬಗೆಯ ತಲಾ ಎರಡೆರಡು ಹಣ್ಣುಗಳು ₹ ೧೦೦-೧೨೦ರ ವರೆಗೆ ಮಾರಾಟವಾಗುತ್ತಿದ್ದು, ಬೆಳಕಿನ ಹಬ್ಬಕ್ಕೆ ಸಂಪ್ರದಾಯ ಮುರಿಯದವರು ಮಾತ್ರ ಪಿಂಗಾಣಿ ಹಣತೆ ಬದಲಾಗಿ ಮಣ್ಣಿನ ಹಣತೆಗಳನ್ನು ಕೊಳ್ಳುತ್ತಿದ್ದರಿಂದ ಮಣ್ಣಿನ ಹಣತೆ ಮಾರುವ ಕುಂಬಾರರು ಮಾತ್ರ ಪ್ರತಿ ವರ್ಷದಂತೆ ಈ ವರ್ಷ ವ್ಯಾಪಾರ ಇಲ್ಲ ಎಂದು ಗೊಣಗುತ್ತಿದ್ದಾರೆ. ಬಟ್ಟೆ, ಬಂಗಾರದ ಅಂಗಡಿಗಳಲ್ಲಿ ಜನರು ಭರ್ಜರಿ ವ್ಯಾಪಾರ ಮಾಡುತ್ತಿದ್ದದ್ದು ಸಾಮಾನ್ಯವಾಗಿದೆ.

ಪ್ರತಿ ವರ್ಷ ಪಟ್ಟಣದ ಜೋಡು ರಸ್ತೆಯಲ್ಲಿ ದೀಪಾವಳಿ ಹಬ್ಬದ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ಆದರೆ ಸುಗಮ ಸಂಚಾರ ಹಿನ್ನೆಲೆಯಲ್ಲಿ ಎಪಿಎಂಸಿ ಎದುರಿನ ಬಯಲು ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಬುಧವಾರ ಸಂಜೆಯಿಂದಲೇ ಆರಂಭವಾಗಿರುವ ವ್ಯಾಪಾರ ಗುರುವಾರ ಬಿರುಸು ಪಡೆದುಕೊಂಡಿದ್ದು, ಜನಜಂಗುಳಿ ಹೆಚ್ಚಾಗಿದೆ. ಪಟ್ಟಣದಲ್ಲಿ ಹಬ್ಬದ ಹಿನ್ನೆಲೆ ಉಂಟಾಗುವ ವಾಹನಗಳ ದಟ್ಟನೆ ನಿಯಂತ್ರಿಸಲು ಪಿಎಸ್‌ಐ ಸೋಮನಗೌಡ ಗೌಡ್ರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸುಗಮ ಸಂಚಾರ ಹಾಗೂ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲು ಹರಸಾಹಸ ಪಡುತ್ತಿರುವುದು ಕಂಡು ಬಂದಿತು.

ವ್ಯಾಪಾರಿಗಳಿಗಿಲ್ಲ ಸೌಲಭ್ಯ: ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ವ್ಯಾಪಾರ-ವಹಿವಾಟು ಜೋರಾಗಿ ನಡೆಯುತ್ತಿದೆ. ಆದರೆ ವ್ಯಾಪಾರಿಗಳಿಗೆ ಮೂಲಸೌಲಭ್ಯಗಳಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ನೈಸರ್ಗಿಕ ಕರೆಗಳಿಗೆ ಪರದಾಡುವ ದುಸ್ಥಿತಿ ಇದೆ. ಮೂರ್ನಾಲ್ಕು ದಿನಗಳ ಕಾಲ ಸಾಗುವ ಹಬ್ಬದ ವ್ಯಾವಾರ ವಹಿವಾಟಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಪುರಸಭೆ ಆಡಳಿತ ಮುಂದಾಗಿಲ್ಲ ಎಂಬ ದೂರುಗಳು ಕೇಳಿ ಬಂದವು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ