- ಹೊನ್ನಾಳಿಯಲ್ಲಿ ಹಿರೇಕಲ್ಮಠ ಸ್ವಾಮೀಜಿ ಆಶೀರ್ವಚನ । ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮ
- - - ಕನ್ನಡಪ್ರಭ ವಾರ್ತೆ ಹೊನ್ನಾಳಿಭಗವಂತನನ್ನು ಬಿಟ್ಟರೆ ಬದುಕೇ ಇಲ್ಲ ಎನ್ನುವುದೇ ಭಾರತೀಯ ಧರ್ಮ ಸಂಸ್ಕೃತಿಯಾಗಿದೆ. ಗುರುಗಳೇ ಜಗದ ಮೂಲವಾಗಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಹಾಸುಹೊಕ್ಕಾಗಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬೇಡ ಜಂಗಮ ಸಮಾಜಸೇವಾ ಸಂಘ ವತಿಯಿಂದ ಹೊನ್ನಾಳಿ ಪಟ್ಟಣದ ಕನಕ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.3 ವರ್ಷಗಳಿಂದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವವನ್ನು ಸರ್ಕಾರದ ವತಿಯಿಂದ ಆಚರಿಸುವ ಪದ್ಧತಿ ಜಾರಿಗೊಳಿಸಿದೆ. ದೇಶದ ಇತಿಹಾಸದಲ್ಲಿ ಬಂದು ಹೋಗಿರುವ ಎಲ್ಲ ಮಹಾನ್ ಪುರುಷರು ಇಡೀ ಮನುಕುಲದ ಶ್ರೇಯೋಭಿವೃದ್ಧಿಗೆ ಧರ್ಮೋಪದೇಶ, ವಚನಗಳು, ಸಾಹಿತ್ಯಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ. ಹಾಗಾಗಿ, ಎಲ್ಲ ಮಹಾನ್ ಪುರುಷರು ಕೇವಲ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಇದನ್ನು ಅರಿತು ನಾವು ಅವರನ್ನು ಜಾತಿಗಳಿಗೆ ಸೀಮಿತಗೊಳಿಸದೇ ಆರಾಧಿಸಬೇಕು ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯ ಅವರು ದಶಧರ್ಮ ಸೂತ್ರಗಳನ್ನು ನೀಡಿದ್ದಾರೆ. ಇವುಗಳನ್ನು ಪರಿಪಾಲಿಸಿದರೆ ಎಲ್ಲ ವರ್ಗದ ಜನ ತಮ್ಮ ಬದುಕಿನುದ್ದಕ್ಕೂ ಸುಖ, ಶಾಂತಿಯಿಂದ ಜೀವನ ನಡೆಸಬಹುದು. ಈ ಎಲ್ಲ ಮಹಾನೀಯರು ಸಮಾಜ, ಮನುಕುಲಕ್ಕಾಗಿ ನೀಡಿರುವ ಜೀವನ ಮಾರ್ಗದರ್ಶನದ ಕಾರಣಕ್ಕೆ ಅವರ ಜಯಂತಿಗಳನ್ನು ಆಚರಿಸಬೇಕು. ಅದೇ ನಾವು ಸಲ್ಲಿಸಬಹುದಾದ ಕೃತಜ್ಞತೆಯಾಗಿದೆ ಎಂದರು.ಶಿಕ್ಷಕ ಕೊಟ್ರೇಶ್ ಜಿ. ಅವರು ಜಗದ್ಗುರು ರೇಣುಕಾಚಾರ್ಯ ಅವರ ಧಾರ್ಮಿಕ ಬದುಕು, ವೀರಶೈವ ಧರ್ಮ ಸೂತ್ರಗಳು, ಪಂಚಪೀಠಗಳ ಧಾರ್ಮಿಕ ಹಿರಿಮೆಗಳ ಕುರಿತು ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಜನಜಾಗೃತಿ ವೇದಿಕೆಯ ಬಿ.ಎಲ್.ಕುಮಾರ ಸ್ವಾಮಿ ಮಾತನಾಡಿದರು.
ತಾಲೂಕು ಬೇಡ ಜಂಗಮ ಸಮಾಜಸೇವಾ ಸಂಘದ ಅಧ್ಯಕ್ಷ ಎಂ.ಪಂಚಾಕ್ಷರಯ್ಯ ಬೈರನಹಳ್ಳಿ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.ಸಮಾರಂಭದಲ್ಲಿ ಗೋವಿನಕೋವಿ ಬೃಹನ್ಮಠದ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಹಾಗೂ ರಾಂಪುರ ಮಠದ ಶಿವಕುಮಾರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ತಹಸೀಲ್ದಾರ್ ಪಟ್ಟರಾಜ ಗೌಡ, ಬೇಡ ಜಂಗಮ ಸಮಾಜದ ಹಿರಿಯ ಮುಖಂಡ ಎಚ್.ಎಂ. ಗಂಗಾಧರಯ್ಯ ಹಿರೇಮಠ, ಎನ್.ಕೆ. ವಿಶ್ವಾರಾಧ್ಯ ಕೋಹಳ್ಳಿಮಠ, ಬೇಡ ಜಂಗಮ ಸಮಾಜದ ಹಿರಿಯ ಮುಖಂಡ ಕೆ.ಎಂ. ಪರಮೇಶ್ವರಯ್ಯ, ಕೆ.ವಿ. ಬಸವರಾಜಯ್ಯ ಕುಳಗಟ್ಟೆ, ಸಮಾಜದ ಗೌರವಾಧ್ಯಕ್ಷ ಎಂ.ರುದ್ರಯ್ಯ, ನಾಗರಾಜಯ್ಯ ಆರ್.ಎಂ., ನ್ಯಾಮತಿ- ಹೊನ್ನಾಳಿಯ ಅನೇಕ ಮುಖಂಡರು ಭಾಗವಹಿಸಿದ್ದರು.
ಎಂ.ಎಸ್.ಶಾಸ್ತ್ರಿ ಹೊಳೆಮಠ ತಂಡದಿಂದ ವೇದಘೋಷ ನಡೆಯಿತು. ಪ್ರೀತಿ ಭರತ್ ಸ್ವಾಗತಿಸಿ, ಶಿಕ್ಷಕ ಕರಿಬಸಯ್ಯ ಕಾರ್ಯಕ್ರಮ ನಿರೂಪಿಸಿದರು. ಭರಣಿಪ್ರಿಯ ಬಿ.ಎಚ್. ಅವರು ಸ್ವಾಗತ ನೃತ್ಯ ಮಾಡಿದರು. ಡಾ. ಚಂದ್ರಶೇಖರ ಸಾಲಿಮಠ ವಂದಿಸಿದರು.- - -
ಬಾಕ್ಸ್ * ಗಮನ ಸೆಳೆದ ಬೃಹತ್ ಭಾವಚಿತ್ರ ಮೆರವಣಿಗೆ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮ ನಿಮಿತ್ತ ಪವಿತ್ರ ಕ್ಷೇತ್ರ ಹಿರೇಕಲ್ಮಠದಿಂದ ಬೆಳಗ್ಗೆ ರೇಣುಕಾಚಾರ್ಯರ ಬೃಹತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಆನೆ ಅಂಬಾರಿ ಮೇಲಿರಿಸಿ ಪಂಚಪೀಠದ ಧ್ವಜಗಳನ್ನು ಹಿಡಿದು, ಡೊಳ್ಳು, ವೀರಗಾಸೆ ಮುಂತಾದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಕನಕ ರಂಗಮಂದಿರವರೆಗೂ ಸಾಗಿತು. ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.- - - -12ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಬೇಡ ಜಂಗಮ ಸಮಾಜಸೇವಾ ಸಂಘದಿಂದ ಹೊನ್ನಾಳಿ ಕನಕ ರಂಗಮಂದಿರದಲ್ಲಿ ಬುಧವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.