ವಿಜಯಪುರ: ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ, ಏಕತೆ ತುಂಬಿಸಬೇಕಿದೆ. ಪೂರ್ವಜರ ತ್ಯಾಗ ಬಲಿದಾನಗಳಿಂದ ದಕ್ಕಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ೧೯೪೭ ಆಗಸ್ಟ್ ೧೫ರಂದು ಭಾರತ ಬ್ರಿಟೀಷರ ದಾಸ್ಯದಿಂದ ಮುಕ್ತವಾಯಿತು. ಸುಮಾರು ೨೦೦ ವರ್ಷ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಬಲಿದಾನ-ತ್ಯಾಗದಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಕಾಪಾಡಿಕೊಂಡು ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಬದುಕಬೇಕು ಎಂದು ತಿಳಿಸಿದರು.
ಬಸವ ಕಲ್ಯಾಣ ಮಠ ಅಧ್ಯಕ್ಷ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ನೂರಾರು ಮಹನೀಯರು ಅಂದು ಹೋರಾಡಿದ ಪರಿಣಾಮ ಇಂದು ದೇಶದಲ್ಲಿ ಶಾಂತಿ, ನೆಮ್ಮದಿ, ನೆಲೆಸಲು ಸಾಧ್ಯವಾಗಿದೆ. ಪ್ರತಿ ಭಾರತೀಯರ ನಿವಾಸದ ಮೇಲೆ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜ ಹಾರಾಡಬೇಕು. ದೇಶ ಪ್ರೇಮಿಗಳ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು, ಮಹಾತ್ಮಾಂಜನೇಯ, ತಂಡದಿಂದ ವಂದೇ ಮಾತರಂ ಗೀತೆ, ದೇಶಭಕ್ತಿಗೀತೆ, ಧ್ವಜಗೀತೆ, ನಾಡಗೀತೆ, ರೈತಗೀತೆಗಳು ಹಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದರು. ಪಥ ಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನ ನೀಡಲಾಯಿತು. ದಿವಂಗತ ಬಿ. ಮುನಿಕೃಷ್ಣಪ್ಪನವರ ಸ್ಮರಣಾರ್ಥ ಅವರ ಮಕ್ಕಳಾದ ರವೀಶ್ ಮತ್ತು ಪ್ರಶಾಂತ್ ಸುಮಾರು ೨೦೦೦ಕ್ಕೂ ಹೆಚ್ಚು ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಮಂಡಿಬೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವಾ ಮಕ್ಕಳಿಗೆ ಸಿಹಿ ತಿನಿಸು ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷೆ ತಾಜುನ್ನಿಸ ಮಹಬೂಬ್ ಪಾಷಾ, ಸದಸ್ಯರಾದ ನಂದಕುಮಾರ್, ನಾರಾಯಣಸ್ವಾಮಿ, ಶಿಲ್ಪ ಅಜಿತ್, ರಾಧಮ್ಮ ಪ್ರಕಾಶ್, ಕವಿತಾ ಅಂಜನಪ್ಪ, ಆಯಿಷ ಸೈಫುಲ್ಲಾ, ಎಂ ಭೈರೇಗೌಡ, ಪುರಸಭಾ ಇಂಜಿನಿಯರ್ ಶೇಖರ, ಆರೋಗ್ಯ ಅಧಿಕಾರಿಗಳಾದ ಲಾವಣ್ಯ, ಶಹರಿ ರೋಜ್ಗಾರ್ ಯೋಜನಾಧಕಾರಿ ಶಿವ ನಾಗೇಗೌಡ, ಜೋಶಿ, ಜನಾರ್ದನ್, ಅನಿಲ್, ಮತ್ತಿತರೆ ಅಧಿಕಾರಿ ವರ್ಗ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.