ಗವಾಯಿಗಳದ್ದು ವಿಶ್ವವಿದ್ಯಾಲಯಕ್ಕಿಂತ ಮಹೋನ್ನತ ಕಾರ್ಯ: ರಾಘವೇಂದ್ರ ಆಯಿ

KannadaprabhaNewsNetwork | Published : Mar 5, 2025 12:35 AM

ಸಾರಾಂಶ

ದೇಶದ ಯಾವ ವಿಶ್ವವಿದ್ಯಾಲಯಗಳು ಮಾಡಲಾಗದಷ್ಟು ಮಹೋನ್ನತ ಕೆಲಸವನ್ನು ಸಂಗೀತ ಕ್ಷೇತ್ರದಲ್ಲಿ ಪುಟ್ಟರಾಜ ಗವಾಯಿಗಳು ಮಾಡಿದ್ಧಾರೆ ಎಂದು ಸಿತಾರರತ್ನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಹೇಳಿದರು.

ಧಾರವಾಡ: ದೇಶದ ಯಾವ ವಿಶ್ವವಿದ್ಯಾಲಯಗಳು ಮಾಡಲಾಗದಷ್ಟು ಮಹೋನ್ನತ ಕೆಲಸವನ್ನು ಸಂಗೀತ ಕ್ಷೇತ್ರದಲ್ಲಿ ಪುಟ್ಟರಾಜ ಗವಾಯಿಗಳು ಮಾಡಿದ್ಧಾರೆ ಎಂದು ಸಿತಾರರತ್ನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಹೇಳಿದರು.

ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನದ ಅಂಗವಾಗಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ, ಪುಟ್ಟರಾಜ ಸಮ್ಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಟ್ಟರಾಜ ಗವಾಯಿಗಳು ಸಹಸ್ರಾರು ಶಿಷ್ಯರಿಗೆ ಸಂಗೀತ ಕಲಿಸಿ ಅವರನ್ನು ಬೆಳೆಸಿದ್ದಾರೆ. ಅಂಧರಾಗಿದ್ದ ಗವಾಯಿಗಳು ಸಾಧನೆ ಮಾಡಿದ ತಪಸ್ವಿ. ಅವರೊಳಗೆ ಜ್ಞಾನದ ಕಣ್ಣಿತ್ತು. ದಿವ್ಯದೃಷ್ಟಿಯಿಂದ ಮಹಾನ್‌ ಸಂಗೀತಗಾರರನ್ನು ಕೊಡುಗೆ ನೀಡಿದ್ಧಾರೆ. ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಧಾರವಾಡ ಸಂಗೀತ ಎಲ್ಲ ಕಡೆ ಪ್ರಸಿದ್ಧಿಯಾಗಿದೆ. ಇಲ್ಲಿನ ಸಂಗೀತ ಪರಂಪರೆಯನ್ನು ಪಂಡಿತ ವೆಂಕಟೇಶಕುಮಾರ್‌, ಪಂಡಿತ ಗಣಪತಿ ಭಟ್‌ ಹಾಸಣಗಿ, ಕೈವಲ್ಯ ರಘುನಾಥ ನಾಕೋಡ ಮೊದಲಾದವರು ಮುಂದುವರಿಸಿದ್ದಾರೆ. ಗಣಪತಿ ಭಟ್‌ ಹಾಸಣಗಿ ಅವರು 50 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ–ಧಾರವಾಡದ ಈಗಿನ ತಲೆಮಾರಿನ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ಸಾಧನೆಯಲ್ಲಿ ತೊಡಗಿದ್ದಾರೆ. ಸಂಗೀತ ಕಲಿಕೆ, ಪ್ರಸ್ತುತಿ ಹಾಗೂ ಕಾರ್ಯಕ್ರಮ ಸಂಘಟನೆ ಈ ಮೂರೂ ಬಹಳ ಮುಖ್ಯ ಎಂದು ಹೇಳಿದರು.

ಪುಟ್ಟರಾಜ ಗವಾಯಿ ಸಮ್ಮಾನ ಸ್ವೀಕರಿಸಿದ ಪಂ. ಗಣಪತಿ ಭಟ್‌ ಹಾಸಣಗಿ, ಈ ಹಿಂದೆ ಬಸವರಾಜ ರಾಜಗುರು ಪ್ರಶಸ್ತಿ ಸಂದಿದ್ದು ನನ್ನ ಬದುಕಿನ ಸಾರ್ಥಕ ಕ್ಷಣಗಳು. ಪುಟ್ಟರಾಜ ಗವಾಯಿಯವರು ಅದ್ಭುತವಾದ ಸಾಮಾಜಿಕೆ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ ಇತ್ತು. ಧಾರವಾಡದ ಜನರು ನನಗೆ ಪ್ರೀತಿ, ಪ್ರೋತ್ಸಾಹ ನೀಡಿ ಸಾಧನೆಗೆ ಪ್ರೇರಣೆ ನೀಡಿದ್ದಾರೆ ಎಂದರು. ನಂತರ ಹಾಸಣಗಿ ಅವರು ಗಾಯನ ಪ್ರಸ್ತುತಪಡಿಸಿದರು. ಗುರುಪ್ರಸಾದ್‌ ಹಗಡೆ, ಶ್ರೀಧರ ಮಾಂಡ್ರೆ ಸಾಥ್‌ ನೀಡಿದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಇದ್ದರು.

Share this article