ಕೊಪ್ಪದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಮಲೆನಾಡ ಹಬ್ಬ
ಕನ್ನಡಪ್ರಭ ವಾರ್ತೆ, ಕೊಪ್ಪಕೊಪ್ಪ ಮತ್ತು ನ.ರಾ. ಪುರ ತಾಲೂಕಿನ ಸಮಾನ ಮನಸ್ಕ ಐವರು ಮಹಿಳೆಯರು ಮಹಿಳಾ ಸಬಲೀಕರಣದ ಉದ್ದೇಶದಿಂದ ರಚಿಸಿಕೊಂಡ ಶ್ರೀ ಸಾಯಿ ಗ್ರೂಪ್ ಸಂಘಟನೆ ಕಳೆದ ವರ್ಷ ಕೊಪ್ಪದಲ್ಲಿ ಪ್ರಪ್ರಥಮ ಬಾರಿಗೆ ಮಲೆನಾಡ ಹಬ್ಬ ಕಾರ್ಯಕ್ರಮ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತೀ ಕ್ಷೇತ್ರದಲ್ಲೂ ಮಹಿಳೆಯರು ಗುರುತಿಸಿಕೊಳ್ಳುತ್ತಿದ್ದು ಮಹಿಳಾ ಸಬಲೀಕರಣವಾದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮಲೆನಾಡು ಹಬ್ಬದಲ್ಲಿ ಸಾಬೀತು ಪಡಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಸ್ವಾಗತಾರ್ಹ ಎಂದರು.
ಗ್ರಾಮೀಣ ಭಾಗದ ಮಲೆನಾಡ ಅನೇಕ ಮಹಿಳೆಯರು ತಾವೇ ತಯಾರಿಸಿದ ನಿತ್ಯ ಬಳಕೆ ವಸ್ತುಗಳಾದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಗೃಹಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದು ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲು ನೆರವಾಗು ವಂತೆ ಮಲೆನಾಡು ಹಬ್ಬ ಎನ್ನುವ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಸಾಯಿ ಗ್ರೂಪ್‌ನ ಮುಖ್ಯಸ್ಥೆ, ಕಾರ್ಯಕ್ರಮ ಆಯೋಜಕಿ ಅನ್ನಪೂರ್ಣ ನರೇಶ್ ಹೇಳಿದರು.ಕಳೆದ ಬಾರಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಈ ಬಾರಿಯೂ ಮಲೆನಾಡು ಹಬ್ಬ ಆಯೋಜಿಸುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಭಾನುವಾರ ಕೊಪ್ಪ ಪುರಭವನದಲ್ಲಿ ನಡೆದ ಮಲೆನಾಡ ಹಬ್ಬದಲ್ಲಿ ಸುಮಾರು 50ಕ್ಕಿಂತ ಹೆಚ್ಚು ಅಂಗಡಿ ಮಳಿಗೆಗಳು ತೆರೆದಿದ್ದು ಮಲೆನಾಡಿನ ಮಹಿಳೆಯರಿಂದ ತಯಾರಾಗುವ ವಿಶೇಷ ತಿಂಡಿ ತಿನಿಸುಗಳು, ಬಗೆಬಗೆಯ ಆಹಾರ ಖಾದ್ಯಗಳು, ಗೃಹೋಪಯೋಗಿ ಮತ್ತು ಗೃಹಲಂಕಾರ ವಸ್ತುಗಳು, ಸೀರೆಗಳು, ಕುರ್ತಿಸ್ ಸೇರಿದಂತೆ ಎಲ್ಲಾ ತರಹದ ಸಿದ್ಧ ಉಡುಪುಗಳು, ಬೆಡ್‌ಶಿಟ್, ಆಭರಣಗಳು, ಹೋಂ ಮೇಡ್ ಪೌಡರ್‌ಗಳು, ಹೂವಿನ ಗಿಡ ಮತ್ತು ಪಾಟ್‌ಗಳು ಇನ್ನು ಮುಂತಾದ ಅನೇಕ ಸಾಧನಗಳು ಗ್ರಾಮೀಣ ಮಹಿಳೆಯರಿಂದ ಮಾರಾಟವಾಗಲಿದೆ. ಕೃಷಿ ಯಂತ್ರೋಪ ಕರಣ, ಟೈಲ್ಸ್ಗಳು ಮತ್ತು ರೂಫಿಂಗ್ ಟೈಲ್ಸ್, ಅಡಿಕೆ ಸುಲಿಯುವ ಯಂತ್ರಗಳ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆದು ಸಹಸ್ರಾರು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಶೃಂಗೇರಿ ಕ್ಷೇತ್ರ ಶಾಸಕ, ನವೀಕರಿಸಬಹುದಾದ ಇಂಧನ ಪ್ರಾಧಿಕಾರದ ಅಧ್ಯಕ್ಷ ಟಿ.ಡಿ.ರಾಜೇಗೌಡರು ಕಾರ್ಯಕ್ರಮ ವೀಕ್ಷಿಸಿ ಇನ್ನು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ನಡೆಯಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಆಯೋಜಕರಾದ ಅನ್ನಪೂರ್ಣ ನರೇಶ್, ವೀಣಾ ರತ್ನಾಕರ್, ನ.ರಾ.ಪುರದ ಶೋಪಿನ ಸುರೇಶ್, ಶೀಲಾ ಸುಂದರೇಶ್, ಭಾರತಿ ಚಂದ್ರಶೇಖರ್, ಹರಿಹರಪುರ ಲಯನ್ಸ್ ಕ್ಲಬ್ ಅಧ್ಯಕ್ಷೆ ಪಲ್ಲವಿ ದೀಪಕ್, ವರ್ತಕರ ಸಂಘದ ಅಧ್ಯಕ್ಷ ಕೆ.ಎನ್. ಪ್ರಸನ್ನ ಶೆಟ್ಟಿ, ಹರಂದೂರು ಗ್ರಾಪಂ ಸದಸ್ಯ ಎಂ.ಸಿ. ಆಶೋಕ್, ಆನಂದ್ ಕೆ. ಬ್ಲಾಕ್ ಕಾಂಗ್ರೆಸ್ ಸಹಕಾರ್ಯದರ್ಶಿ ಬರ್ಕತ್ ಆಲಿ ಸೇರಿದಂತೆ ಇತರರಿದ್ದರು.