ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಾಚಿದೇವ: ವಿಜಯೇಂದ್ರ

KannadaprabhaNewsNetwork |  
Published : Feb 05, 2024, 01:45 AM IST
ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ವಿಜಯೇಂದ್ರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರರು. | Kannada Prabha

ಸಾರಾಂಶ

ಮಡಿವಾಳ ಮಾಚಿದೇವ ಮಹಾಸ್ವಾಭಿಮಾನಿ. ವೀರಭದ್ರನ ಅವತಾರ ಎಂದು ಪುರಾಣಗಳಲ್ಲಿ ದಾಖಲಾಗಿರುವ ಮಾಚಿದೇವ ಅವರು, "ಅರಸುತನ ಮೇಲಲ್ಲ ಅಗಸತನ ಕೀಳಲ್ಲ " ಎಂದು ತಿಳಿಸಿದ್ದಾರೆ. ಕಲ್ಯಾಣ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವ ಸರ್ವಶ್ರೇಷ್ಠ ಕಾಯಕನಿಷ್ಠ ಶರಣರಾಗಿ, ಧರ್ಮ ಸಂರಕ್ಷಣೆ ಜತೆಗೆ ವಚನ ಸಾಹಿತ್ಯ ರಕ್ಷಣೆಯ ದಂಡ ನಾಯಕತ್ವ ವಹಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವೀರ ಶರಣರು ಎಂದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಶಿಕಾರಿಪುರದ ಮಟ್ಟಿಕೋಟೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಕಲ್ಯಾಣ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವ ಸರ್ವಶ್ರೇಷ್ಠ ಕಾಯಕನಿಷ್ಠ ಶರಣರಾಗಿ, ಧರ್ಮ ಸಂರಕ್ಷಣೆ ಜತೆಗೆ ವಚನ ಸಾಹಿತ್ಯ ರಕ್ಷಣೆಯ ದಂಡ ನಾಯಕತ್ವ ವಹಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವೀರ ಶರಣರು ಎಂದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ತಾಲೂಕಿನ ಮಟ್ಟಿಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಗ್ರಾಪಂ ವತಿಯಿಂದ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಹಾಗೂ ಸಂವಿಧಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವ ಮಹಾಸ್ವಾಭಿಮಾನಿ. ವೀರಭದ್ರನ ಅವತಾರ ಎಂದು ಪುರಾಣಗಳಲ್ಲಿ ದಾಖಲಾಗಿರುವ ಮಾಚಿದೇವ ಅವರು, "ಅರಸುತನ ಮೇಲಲ್ಲ ಅಗಸತನ ಕೀಳಲ್ಲ " ಎಂದು ತಿಳಿಸಿದ್ದಾರೆ. ಭವ್ಯ ಪರಂಪರೆ ಹೊಂದಿದ ನಾಡಿನಲ್ಲಿ 12ನೇ ಶತಮಾನದಲ್ಲಿ ವಚನ ಕ್ರಾಂತಿ ಸಂದರ್ಭ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಪ್ರಾಣವನ್ನೂ ಲೆಕ್ಕಿಸದೇ ಸಂರಕ್ಷಿಸಿದ ಹಿರಿಮೆ ಹೊಂದಿದ್ದಾರೆ ಎಂದು ತಿಳಿಸಿದರು.

ಅನುಭವ ಮಂಟಪ ಪ್ರವೇಶಿಸಲು ಮಾಚಿದೇವ ಅವರ ಅನುಮತಿ ಅತ್ಯಗತ್ಯವಾಗಿದೆ. ಬಿಜ್ಜಳ ಅರಸನಿಗೂ ಹೆದರದ ಧೀರನಾಗಿದ್ದ ಮಾಚಿದೇವ 300ಕ್ಕೂ ಅಧಿಕ ವಚನಗಳನ್ನು ರಚಿಸಿ, ಕಾಯಕ ಸಮಾಜ ಒಗ್ಗೂಡಿಸಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ದಂಡನಾಯಕನ ಬಹುಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಸರ್ವಶ್ರೇಷ್ಠ ಕಾಯಕ ನಿಷ್ಠರಾಗಿ ಧರ್ಮ ಸಂರಕ್ಷಣೆಯ ಜತೆಗೆ ವಚನ ಸಾಹಿತ್ಯ ರಕ್ಷಣೆಯ ದಂಡ ನಾಯಕತ್ವ ವಹಿಸಿಕೊಂಡು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಶರಣ ಎನಿಸಿದ್ದಾರೆ ಎಂದರು.

12ನೇ ಶತಮಾನದಲ್ಲಿ ಅಧಿಕವಾಗಿದ್ದ ಮೂಢನಂಬಿಕೆ, ಸಾಮಾಜಿಕ ಅಸಮಾನತೆ, ಅನಿಷ್ಠ ಪದ್ಧತಿಗಳ ವಿರುದ್ಧ ಸಾಮಾಜಿಕ ಕ್ರಾಂತಿ ಕೈಗೊಂಡಿದ್ದ ಮಡಿವಾಳ ಮಾಚಿದೇವನ ತತ್ವಾದರ್ಶ ಸರ್ವಕಾಲಿಕವಾಗಿದೆ. ಸಮಾಜದಲ್ಲಿ ಜಾತಿಗಿಂತ ಜೀವನ ಮುಖ್ಯ ಎಂದು ತೋರಿಸಿಕೊಟ್ಟು ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಸಂವಿಧಾನ ರಚನೆಯಲ್ಲಿ ಡಾ.ಅಂಬೇಡ್ಕರ್‌ ಕೊಡುಗೆ ಅಪಾರವಾಗಿದೆ. ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಸಂವಿಧಾನ ಪಾತ್ರ ಮಹತ್ವವಾಗಿದೆ. ಮೋದಿ ಪ್ರಧಾನಿಯಾದ ನಂತರದಲ್ಲಿ ಡಾ.ಅಂಬೇಡ್ಕರ್ ಅವರ ಜನ್ಮಸ್ಥಳ, ಅಧ್ಯಯನ ಕೈಗೊಂಡ ಲಂಡನ್ ಸಹಿತ ಪಂಚಧಾಮವನ್ನು ಸಮಗ್ರ ಅಭಿವೃದ್ಧಿಗೊಳಿಸಿ ಗೌರವ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ. ಬಳಿಗಾರ್ ಮಾತನಾಡಿ, ಅಮೆರಿಕ, ಇಂಗ್ಲೆಂಡ್, ಕೆನಡಾ ಸಹಿತ ಜಗತ್ತಿನ ಹಲವು ದೇಶಗಳ ಸಂವಿಧಾನದ ಸಮಗ್ರ ಅಧ್ಯಯನ ಮೂಲಕ ದೇಶಕ್ಕೆ ಅಂಬೇಡ್ಕರ್ ಉತ್ಕೃಷ್ಟ ಸಂವಿಧಾನ ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶವಾಗಿ ಸದೃಢವಾಗಲು ಸಂವಿಧಾನ ಬಹು ಮಹತ್ವವಾಗಿದೆ. ಈ ದಿಸೆಯಲ್ಲಿ ಸಂವಿಧಾನದ ಜಾಗೃತಿಗಾಗಿ ರಾಜ್ಯ ಸರ್ಕಾರ ಆಯೋಜಿಸಿದ ಜಾಗೃತಿ ಅಭಿಯಾನ ಅತ್ಯಂತ ಸೂಕ್ತವಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ರಂಜಿತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಒ ಪರಮೇಶ್, ಸಮಾಜ ಕಲ್ಯಾಣಾಧಿಕಾರಿ ಮಧುಸೂದನ್ ಮುಖಂಡ ಶಿವಬಸವ, ರಸೂಲ್‌ ಸಾಬ್, ಹನುಮಂತಪ್ಪ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಮತ್ತಿತರರು ಉಪಸ್ಥಿತರಿದ್ದರು.

- - -

-2ಕೆಎಸ್.ಕೆಪಿ1:

ಶಿಕಾರಿಪುರ ತಾಲೂಕಿನ ಮಟ್ಟಿಕೋಟೆಯಲ್ಲಿ ಶಾಸಕ ವಿಜಯೇಂದ್ರ ಅವರು ಮಡಿವಾಳ ಮಾಚಿದೇವ ಜಯಂತಿ ಹಿನ್ನೆಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ