ಕನ್ನಡಪ್ರಭ ವಾರ್ತೆ ಅಥಣಿಶಿಕ್ಷಣ ಸಂಸ್ಥೆಗಳು ಅಂದರೆ ಕೇವಲ ಕಟ್ಟಡಗಳಲ್ಲ, ಅವು ಜ್ಞಾನ ದೇಗುಲ. ಮಕ್ಕಳಿಗೆ ಅಕ್ಷರದ ಅರಿವು ಮೂಡಿಸುವ ಮೂಲಕ ಉತ್ತಮ ಸಂಸ್ಕಾರದ ಜೊತೆಗೆ ದೇಶದ ಸಂಸ್ಕೃತಿ ಕಲಿಸುವುದೇ ಶಿಕ್ಷಣವಾಗಿದೆ ಎಂದು ಶೇಗುಣಸಿಯ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ನಾಂದಣಿ ಜೈನ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ವರ್ಧಮಾನದ ಅರ್ಥ ಬೆಳವಣಿಗೆ, ಹಾಗಾಗಿ ಶಿಕ್ಷಣ ಸಂಸ್ಥೆ ಬೆಳೆಯುತ್ತಲೆ ಇರುತ್ತದೆ. ಹೆಸರಿಗೆ ತಕ್ಕಂತೆ ಸಂಸ್ಥೆ ಬೆಳವಣಿಗೆ ಕಾಣುತ್ತಿದೆ. ಸಂಸ್ಕಾರದ ಜೊತೆಗೆ ಶಿಕ್ಷಣ ಕೊಡುತ್ತ ಸಸಿಯಾಗಿದ್ದ ವರ್ಧಮಾನ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.
ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿ ಶ್ರೀಮದಭಿನವ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಪವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಕಿರುಚಿತ್ರವನ್ನು ಭಟ್ಟಾರಕ ಶ್ರೀಗಳು ಬಿಡುಗಡೆಗೊಳಿಸಿದರು. ಜಿನೈಕ್ಯರಾದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ಪ್ರಾಸ್ತಾವಿಕವಾಗಿ ಮಾತನಾಡಿದ ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸಿದ್ದಪ್ಪ ನಾಗನೂರ, ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಮಾಡುವ ನಿರ್ಧಾರ ಮಾಡಿದಾಗ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಯ ಮೈದಾನ, ಧ್ವಜ ಕಟ್ಟೆ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ನಿಧಿ ನೀಡುವ ಮೂಲಕ ತಾವು ಕಲಿತ ಶಾಲೆಯ ಮೇಲಿನ ಪ್ರೀತಿ ತೋರಿಸಿದ್ದಾರೆ ಎಂದರು.
ಕೋಟ್
ಪಾಲಕರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಶಾಲೆಯಲ್ಲಿ ಶಿಕ್ಷಕರು ದೇಶದ ಮಹಾನ್ ನಾಯಕರಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿದ್ದೇನೆ ಎಂಬ ಪರಿಕಲ್ಪನೆಯಲ್ಲಿ ಪಾಠ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ಮತ್ತು ಶಿಕ್ಷಣ ನೀಡುವುದು ಪಾಲಕ ಪೋಷಕರ ಜೊತೆಗೆ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.ಡಾ. ಮಹಾಂತ ಪ್ರಭು ಸ್ವಾಮೀಜಿ . ವಿರಕ್ತಮಠ ಸೇಗುಣಿಸಿ