ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಯಡಿಯೂರು ಕೆರೆ, ಕಥಾನಾಯಕನ ಕೆರೆ, ಎಣ್ಣೆಹೊಳೆ ಕೆರೆ ಹಾಗೂ ಹರದಹಳ್ಳಿ ಕೆರೆಗಳನ್ನು ೧೧ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಬಹಳಷ್ಟು ಕೆರೆಗಳು ಹೂಳು ತುಂಬಿರುವುದು, ನೀರು ಬರುವ ಕಾಲುವೆಗಳು ಮುಚ್ಚಿ ಹೋಗಿರುವುದು ಹಾಗೂ ತೂಬು ತಿಥಿಲಗೊಂಡು ಕೆರೆ ಏರಿಗಳು ಸಹ ಕುಸಿಯುವ ಹಂತದಲ್ಲಿವೆ. ಇಂಥ ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಈಗ ಮೊದಲ ಹಂತದಲ್ಲಿ ನಾಲ್ಕು ಕೆರೆಗಳಿಗೆ ೧೧ ಕೋಟಿ ರು. ಬಿಡುಗಡೆಯಾಗಿದೆ. ಈ ಕೆರೆಗಳಲ್ಲಿ ಹೂಳು ತೆಗೆಸುವುದು, ಕಲ್ವಟ್ ನಿರ್ಮಾಣ, ತೂಬು ದುರಸ್ತಿ, ಮಳೆ ನೀರು ಹರಿದು ಬರುವ ನಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಅದರಂತೆ ಕಾಮಗಾರಿ ನಿರ್ವಹಣೆ ಮಾಡುವಂತೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.ಗ್ರಾಮಸ್ಥರು ಕೆರೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಕೆರೆಗಳು ಮಳೆಗಾಲದಲ್ಲಿ ತುಂಬಿದಷ್ಟು ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತದೆ. ಕೆರೆಗಳು ತುಂಬಿದಷ್ಟು ಊರು ಸಮೃದ್ಧವಾಗುತ್ತದೆ. ಹೀಗಾಗಿ ನಮ್ಮ ಪೂರ್ವಿಕರು ಊರಿಗೊಂದು ಕೆರೆ ನಿರ್ಮಿಸಿಕೊಳ್ಳುತ್ತಿದ್ದರು. ಇವನ್ನು ನಾವು, ನೀವು ಸೇರಿ ಸಂರಕ್ಷಣೆ ಮಾಡಬೇಕಾಗಿದೆ. ಗ್ರಾಮಸ್ಥರು ಕೆರೆ ಉಳಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಲ್ಪಿಸಿಕೊಡಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.