ಬಳ್ಳಾರಿ: ಪರಿಸರ ಸಂರಕ್ಷಣೆ, ಮರಗಳನ್ನು ಬೆಳೆಸುವುದು ಕೇವಲ ವರ್ಷಕ್ಕೊಮ್ಮೆ ಮಾಡುವ ಸಾಂಕೇತಿಕ ಆಚರಣೆಯಾಗಬಾರದು. ಬದಲಿಗೆ ಅದು ನಮ್ಮ ದೈನಂದಿನ ಜೀವನಶೈಲಿಯಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಕರೆ ನೀಡಿದರು.ವನಮಹೋತ್ಸವ 2026ರ ಅಂಗವಾಗಿ ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ರೇಡಿಯೋ ಪಾರ್ಕ್ ಬಳಿಯ ಪ್ರಾದೇಶಿಕ ಅರಣ್ಯ ವಿಭಾಗ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರೀನ್ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಿಡಗಳನ್ನು ನೆಡುವ ಪ್ರಕ್ರಿಯೆಯಲ್ಲಿ ಮಕ್ಕಳ ಪಾತ್ರ ದೊಡ್ಡದಿದೆ. ಮಕ್ಕಳ ಬೆಳವಣಿಗೆಯ ಜೊತೆ ಜೊತೆಗೆ ಅವರು ನೆಟ್ಟ ಸಸಿಗಳು ಬೆಳೆಯುವುದನ್ನು ನೋಡುವುದೇ ಒಂದು ಸಂಭ್ರಮ. ನಮ್ಮ ಶಾಲಾ ದಿನಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳ ಬೆಳವಣಿಗೆಯನ್ನು ಪ್ರಾಯೋಗಿಕವಾಗಿ ದಾಖಲಿಸುವ ಚಟುವಟಿಕೆಗಳಿದ್ದವು. ಇಂತಹ ಹವ್ಯಾಸಗಳು ಇಂದಿನ ಮಕ್ಕಳಿಗೂ ಅತ್ಯಗತ್ಯ ಎಂದರು.
ಪ್ರತಿವರ್ಷ ಅರಣ್ಯ ಇಲಾಖೆಯು ಸಸಿಗಳನ್ನು ನೆಡುವ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬ ನಾಗರಿಕ ಕೇವಲ ಸಸಿ ನೆಡುವುದಷ್ಟೇ ಅಲ್ಲದೆ, ಅದನ್ನು ಹೆಮ್ಮರವಾಗಿಸುವವರೆಗೆ ಪೋಷಿಸುವ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಪರಿಸರ ಇದ್ದರೆ ನಾವು ಇರುತ್ತೇವೆ. ಪರಿಸರ ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇರಲ್ಲ. ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದರೆ ಮಾತ್ರ ನಮ್ಮ ಭವಿಷ್ಯ ಚೆನ್ನಾಗಿರಲು ಸಾಧ್ಯ. ಇದಕ್ಕಾಗಿ ಯುವ ಪೀಳಿಗೆಯು ಅರಣ್ಯೀಕರಣ, ಸಾಮಾಜಿಕ ಅರಣ್ಯೀಕರಣ ಹಾಗೂ ಸಸಿ ನೆಡುವ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲ ನೀಡಬೇಕು ಎಂದು ಆಶಿಸಿದರು.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದರೂ ದೇಶಾದ್ಯಂತ ಸಂಪೂರ್ಣವಾಗಿ ಮಳೆಗಾಲ ಆರಂಭವಾಗುವುದು ಜೂನ್ ಅಂತ್ಯಕ್ಕೆ. ಈ ಹಿನ್ನೆಲೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಜುಲೈ ಮೊದಲ ವಾರ ಅತ್ಯಂತ ಸೂಕ್ತವಾದ ಸಮಯವೆಂದು ಪರಿಗಣಿಸಿ ಈ ಸಪ್ತಾಹವನ್ನು ಆಚರಿಸಲಾಗುತ್ತದೆ. ಪ್ರಕೃತಿಯನ್ನು ಇಂದಿನ ಸ್ಥಿತಿಗಿಂತಲೂ ಉತ್ತಮ ರೀತಿಯಲ್ಲಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದರು.
ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ. ಗಿರೀಶಕುಮಾರ್ ಇದ್ದರು.